ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯ ತಾಲೂಕಿನ ದೇವಘಾಟ ಬಳಿ ವಿಜಯನಗರ ಕಾಲುವೆಯ ಸ್ಥಿತಿಗತಿಯನ್ನು ರೈತರ ತಂಡವೊಂದು ಸೋಮವಾರ ವೀಕ್ಷಿಸಿದ್ದು, ಅರೆಬರೆ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸಿದೆ.
ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹಯೋಗದಲ್ಲಿ ವಿತರಣೆ ಕಾಲುವೆಗಳ ದುರಸ್ತಿಗೆ 3 ವರ್ಷಗಳ ಹಿಂದೆ ಅನುದಾನ ಮಂಜೂರಾಗಿದ್ದು, ವಿಎನ್‌ಸಿ ವ್ಯಾಪ್ತಿಯ ಮೇಲ್ದಂಡೆ ಮತ್ತು ಕೆಳ ಭಾಗದ ಕಾಲುವೆ ಕಾಮಗಾರಿ ಯೋಜನೆ ರೂಪಿಸಲಾಗಿತ್ತು. ಟೆಂಡರ್ ಪಡೆದ ಗುತ್ತಿಗೆದಾರರು ಅರೆಬರೆ ಕಾಮಗಾರಿ ನಿರ್ವಹಿಸಿದ್ದಾರೆ ಎಂದು ಅಯೋಧ್ಯಾ, ಢಣಾಪುರ, ಹೆಬ್ಬಾಳ, ಚಿಕ್ಕಜಂತ್ಕಲ್ ಮತ್ತು ಗಂಗಾವತಿ ಭಾಗದ ರೈತರ ತಂಡ ದೂರಿತು.
ನೇತೃತ್ವವಹಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ವಿಎನ್‌ಸಿ ಕಾಲುವೆ ಕಾಮಗಾರಿ ಅರೆಬರೆಯಾಗಿದ್ದು, ಟೆಂಡರ್ ಷರತ್ತಿನಂತೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ. ನಿರ್ವಹಣೆವಹಿಸಿದ್ದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಕಾಲುವೆಯಲ್ಲಿ ಹೂಳು ತುಂಬಿದ್ದು, ನೀರು ಹರಿಯದಂತೆ ಮುಳ್ಳುಕಂಟೆಗಳು ಬೆಳೆದಿವೆ.
ಕಾಲುವೆಗೆ ನೀರು ಹರಿಸುವ ಮುನ್ನವೇ ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಜಲಸಂಪನ್ಮೂಲ ಅಧಿಕಾರಿಗಳನ್ನು ಕರೆಯಿಸಿ, ವಾಸ್ತವ ಸ್ಥಿತಿ ವಿವರಿಸಲಾಗಿದೆ. ಕಾಲುವೆ ನಿರ್ವಹಣೆಗೆ ಅಧಿಕಾರಿಗಳು ಭರವಸೆ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗಮನಕ್ಕೆ ತರಲಾಗಿದೆ. ಕಾಮಗಾರಿ ನಿರ್ವಹಣೆಗೆ ವಾರದ ಗಡವು ನೀಡಲಾಗುವುದು ಎಂದರು.
ಜಲಸಂಪನ್ಮೂಲ ಇಲಾಖೆ ಎಇಇ ವೆಂಕಟೇಶ, ಎಇ ರಾಜಶೇಖರ್, ರೈತ ಪ್ರತಿನಿಧಿಗಳಾದ ಬಿ.ನಾರಾಯಣಪ್ಪ, ರೇಣುಕನಗೌಡ, ರಾಘವೇಂದ್ರ, ವಿರೂಪಾಕ್ಷಗೌಡ, ಕಾರ್ಯದರ್ಶಿ ವಿನೋದ ಇತರರಿದ್ದರು.