ಹನೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಸೋಮವಾರ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಹನೂರಿನಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಯಿತು.
ಪಟ್ಟಣದ ಶ್ರೀಬೆಟ್ಟಳ್ಳಿ ಮಾರಮ್ಮನ ದೇಗುಲದ ಆವರಣದಿಂದ ಹೊರಟ ಪ್ರತಿಭಟನಕಾರರು ವಾಸವಿ ಮಹಲ್ ರಸ್ತೆ, ಮಹದೇಶ್ವರ ಬೆಟ್ಟದ ಮುಖ್ಯರಸ್ತೆಯ ಮೂಲಕ ಖಾಸಗಿ ಬಸ್ ನಿಲ್ದಾಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಖಂಡಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದಿರುವ ದೌರ್ಜನ್ಯ ನಿಜಕ್ಕೂ ಖಂಡನೀಯ. ಇದರಿಂದ ದೇಶವನ್ನು ಕಟ್ಟುವ ಹಿಂದುಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಈ ಬಗ್ಗೆ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಿ ಶಾಂತಿ ಸ್ಥಾಪಿಸಲು ಮುಂದಾಗಬೇಕು. ಜತೆಗೆ ಹಿಂದುಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಮೂರ್ತಿ, ಪಪಂ ಮಾಜಿ ಸದಸ್ಯರಾದ ಬಸವರಾಜು, ರಾಜಶೇಖರಮೂರ್ತಿ, ಪುಟ್ಟರಾಜು, ಮುಖಂಡರಾದ ನಿಶಾಂತ್, ರಂಗಧಾಮಾಚಾರಿ, ವರಪ್ರಸಾದ್, ಕೃಷ್ಣಪ್ಪ, ಚನ್ನಬಸಪ್ಪ, ರಾಜು, ಮೂರ್ತಿನಾಯ್ಡು ಮತ್ತಿತರರು ಪಾಲ್ಗೊಂಡಿದ್ದರು.