ವಿಜಯಪುರ: ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಪವಿತ್ರವಾದ ಜನಿವಾರ ತೆಗೆಯಿಸಿದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಮಸ್ತ ಬ್ರಾಹ್ಮಣ ಸಮುದಾಯದ ಮುಖಂಡರುಗಳು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಪವಿತ್ರ ಜನಿವಾರ ತೆಗೆಸಿರುವ ಘಟನೆ ಸಮಸ್ತ ಬ್ರಾಹ್ಮಣ ಸಮುದಾಯದವರಲ್ಲಿ ನೋವುಂಟು ಮಾಡಿದೆ, ಕೂಡಲೇ ಈ ರೀತಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಧಾರ್ಮಿಕ ಆಚರಣೆಗಳನ್ನು ಮಾಡುವುದು ಧಾರ್ಮಿಕ ಹಕ್ಕು, ಪರೀಕ್ಷೆ ನೆಪದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಪವಿತ್ರ ಜನಿವಾರ ತೆಗೆಯಿಸಲು ಹೇಳಿರುವುದು ನೋವಿನ ಸಂಗತಿ. ಇದು ವಿದ್ಯಾರ್ಥಿಗಳ ಮನಸ್ಸಿಗೂ ಆಘಾತ ತಂದಿದೆ. ಹೀಗಾಗಿ ವಿದ್ಯಾರ್ಥಿ ಆಘಾತದಿಂದ ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲ, ಅವರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೂ ಧಕ್ಕೆಯಾಗಲಿದೆ. ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ಲೋಹದ ಸರ ಧರಿಸಬಾರದು ಎಂಬ ಉಲ್ಲೇಖವಿದೆ, ಆದರೆ ಜನಿವಾರ ಧರಿಸಬಾರದು ಎಂಬ ಯಾವ ಉಲ್ಲೇಖವೂ ಇಲ್ಲ, ಅಧಿಕಾರಿಗಳು ಕೇವಲ ಒಂದು ಸಮುದಾಯ ಧಾರ್ಮಿಕ ಸಂಕೇತವನ್ನು ತೆಗೆದುಹಾಕಲು ಹೇಳಿ ಧರ್ಮಕ್ಕೂ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಯುವ ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿಜಯ ಜೋಶಿ, ಗೋವಿಂದ ಜೋಶಿ, ರಾಕೇಶ ಕುಲಕರ್ಣಿ, ವೆಂಕಟೇಶ ಜೋಶಿ, ವಿಕಾಸ ಪದಕಿ, ಸಂಜೀವ ದೀವಾಣಜಿ, ದತ್ತಾತ್ರಾಯ ಜೋಶಿ, ವೆಂಕಟೇಶ ಗುಡಿ, ಸಂತೋಷ ಕುಲಕರ್ಣಿ, ನಾಗರಾಜ್ ಜೋಶಿ, ಗುರುರಾಜ್ ರಾವ್, ಪ್ರಶಾಂತರಾವ್ ವಲ್ಲಭ ಒತ್ತಾಯಿಸಿದ್ದಾರೆ.