ಮಂಡ್ಯ: ಕಬ್ಬು ಕಟಾವು ಮಾಡಲು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ವಿರುದ್ಧ ತಾಲೂಕಿನ ಮಂಗಲ ಗ್ರಾಮದಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಗ್ರಾಮಕ್ಕೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಭೇಟಿ ನೀಡಿದ ವೇಳೆ ಕಾರನ್ನು ಅಡ್ಡೆಗಟ್ಟಿದ ಗ್ರಾಮಸ್ಥರು, ಕೊತ್ತತ್ತಿ ಹೋಬಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಣತಿಯಂತೆ ಕೆಲವರ ಕಬ್ಬನ್ನು ಮಾತ್ರ ಕಟಾವು ಮಾಡಿಸಲಾಗುತ್ತಿದೆ. ಅವಧಿ ಮೀರಿದ ಕಬ್ಬನ್ನು ಕಟಾವು ಮಾಡಲು ರಾಜಕೀಯ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಸಿ.ಡಿ.ಗಂಗಾಧರ ಮಾತನಾಡಿ, ಎಲ್ಲ ರೈತರನ್ನು ಸಮನಾಗಿ ಕಾಣುತ್ತಿದ್ದೇವೆ. ನಾಳೆಯಿಂದಲೇ ಆಳುಗಳನ್ನು ಕಳುಹಿಸಿ ಎಲ್ಲ ರೈತರ ಕಬ್ಬನ್ನು ಕಟಾವು ಮಾಡಿಸಲಾಗುವುದು ಎಂದರು. ಆದಾಗ್ಯೂ ರೈತರು ಆಕ್ಷೇಪಿಸಿದರು. ಈ ನಡುವೆ ಮಾಹಿತಿ ತಿಳಿದು ಗ್ರಾಮಕ್ಕೆ ಪೊಲೀಸರು ಆಗಮಿಸಿದರು. ಇದಕ್ಕೂ ಆಕ್ರೋಶ ವ್ಯಕ್ತಪಡಿಸಿದ ರೈತರು, ಪೊಲೀಸರಿಂದ ನಮ್ಮ ದನಿ ಅಡಗಿಸಲು ಸಾಧ್ಯವಿಲ್ಲ ಎಂದರು. ಬಳಿಕ ಅಧ್ಯಕ್ಷರು ಸ್ಥಳದಿಂದ ಹೊರಟು ಹೋದರು. ಗ್ರಾಮದ ರೈತರಾದ ಯೋಗೇಶ್, ಮಾದೇಗೌಡ, ಕೆಂಪೇಗೌಡ, ರವೀಂದ್ರ, ಜವರೇಗೌಡ, ಪ್ರಕಾಶ್, ಮೋಹನ್, ಜಯಶಂಕರ್ ಇದ್ದರು.