ಶ್ರೀರಂಗಪಟ್ಟಣ: ಭ್ರಷ್ಟಾಚಾರ, ಸರಣಿ ಅವ್ಯವಹಾರ, ರೈತ ವಿರೋಧಿ ನೀತಿ, ದುರಾಡಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಜವಾದ ಕೊಡುಗೆಗಳಾಗಿದ್ದು, ಮೈಸೂರು ಮಹಾರಾಜ ನಾಲ್ವಡಿ ಅವರ ಹೆಸರೆತ್ತಲು ಇವರು ಅರ್ಹರಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಕಿಡಿಕಾರಿದರು.
ಎಂಎಲ್‌ಸಿ ಯತೀಂದ್ರ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಮಂಗಳವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಕಾವೇರಿ ನದಿಯ ಸ್ನಾನಘಟ್ಟದಿಂದ ತಾಲೂಕು ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಾಲ್ಮೀಕಿ ನಿಗಮ ಹಗರಣವನ್ನು ಸ್ವತಃ ಮುಖ್ಯಮಂತ್ರಿಗಳೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಇಂತಹವರ ನೇತೃತ್ವದಲ್ಲಿ ಭ್ರಷ್ಟಾಚಾರ, ಸಾರ್ವಜನಿಕರ ಮೇಲೆ ದರ್ಪ, ದೌರ್ಜನ್ಯ ಮಿತಿ ಮೀರಿದೆ. ಇನ್ನು ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಯುವಜನರ ವಿನಾಶಕ್ಕೆ ಕಾರಣವಾದ ನೂರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ಧಂಧೆಯನ್ನು ಪತ್ತೆ ಹಚ್ಚಿ ನಿಗ್ರಹಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹೀಗಾಗಿಯೇ ಮುಂಬೈ ಪೊಲೀಸರು ಮೈಸೂರಿಗೆ ಆಗಮಿಸುವಂತಾಯಿತು ಎಂದು ಟೀಕಿಸಿದರು.
ಯಾವುದೇ ಜಾತಿ, ವರ್ಗ ಭೇದವಿಲ್ಲದೆ ಕನ್ನಂಬಾಡಿ ಕಟ್ಟಿದ ಮೈಸೂರು ಮಹಾರಾಜರಿಗೆ ತಂದೆಯನ್ನು ಹೋಲಿಕೆ ಮಾಡಿರುವ ಯತೀಂದ್ರ ಸಿದ್ದರಾಮಯ್ಯ ಮೊದಲು ವಾಸ್ತವತೆ ಅರಿಯಬೇಕು. ಈ ನಾಡಿಗೆ ಹೇಳಲಾರದಷ್ಟು ಕೊಡುಗೆ ನೀಡಿದ ಮಹಾರಾಜ ರಾಜರ್ಷಿ ನಾಲ್ವಡಿ ಸೇರಿದಂತೆ ಸಂಪೂರ್ಣ ಮೈಸೂರು ಅರಸರ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ. ಈ ಬಗ್ಗೆ ಕ್ಷಮೆಕೇಳಬೇಕು ಎಂದು ಒತ್ತಾಯಿಸಿದರು.
ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಕಾರ್ಯದರ್ಶಿ ಗಳಾದ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಪುಟ್ಟಮಾದು, ಸದಸ್ಯರಾದ ಶಿವಣ್ಣ, ಶಿವರಾಜು, ಮಹೇಶ್, ಕೆಂಪಣ್ಣ, ಪುಟ್ಟಸ್ವಾಮಿ, ಶಂಕರ್, ವೃಷಬೇಶ್, ಮಹದೇವು, ಮಹೇಶ್, ಸುರೇಶ್, ರಾಮಚಂದ್ರು, ಬಾಲು, ದೇವರಾಜು, ಸಿದ್ದಪ್ಪ, ಪುರುಷೋತ್ತಮ್ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.