ಜಿಲ್ಲೆ

ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಆಕ್ರೋಶ

ಆರ್.ಕೃಷ್ಣ

ಮೈಸೂರು: ತಾವಿದ್ದ ಪಕ್ಷದ ನಾಯಕರ ಬೆನ್ನಿಗೆ ಚೂರಿ ಹಾಕಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ.ಕಾಟೂರು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜಕೀಯ ನೆಲೆ ಕಲ್ಪಿಸಿಕೊಟ್ಟ ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದ್ದಲ್ಲದೇ ಎಚ್.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಬಾಲಕೃಷ್ಣ ಅವರು ಕಾಂಗ್ರೆಸ್ ಸೇರಿದ್ದಾರೆ. ಅದನ್ನು ಮರೆತು ಈಗ ಕೆ.ಎನ್.ರಾಜಣ್ಣ ಅವರ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಇದ್ದ ಕೆ.ಎನ್.ರಾಜಣ್ಣ ಅವರು ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, ಇಂದಿರಾ ಗಾಂಧಿ, ರಾಜೀವ್‌ಗಾಂಧಿ, ಡಿ.ದೇವರಾಜ ಅರಸು, ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರ ಕಾಲದಿಂದಲೂ ಪಕ್ಷಕ್ಕಾಗಿ ದುಡಿದಿರುವ ರಾಜಣ್ಣ ಬಿಜೆಪಿ ಪಕ್ಷಕ್ಕೆ ಹೋಗಲು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಅವಿವೇಕದ ಮಾತುಗಳನ್ನು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಟೀಕಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಓಲೈಸುವ ಮೂಲಕ ಸ್ವತಃ ಮಂತ್ರಿ ಸ್ಥಾನಕ್ಕಾಗಿ ಅರ್ಜಿ ಹಾಕಿದ್ದಾರೆ. ಪಕ್ಷ, ಹೈಕಮಾಂಡ್ ವಿರುದ್ಧ ಮಾತನಾಡದೆ ಪಕ್ಷವನ್ನೇ ಒಡೆಯುವ ಕುತಂತ್ರಗಳ ವಿರುದ್ಧ ಮಾತನಾಡಿದ್ದಾರಷ್ಟೇ. ಅಂತಹ ರಾಜಣ್ಣ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಲು ತಪ್ಪು ಮಾಹಿತಿ ನೀಡಿ ಕುತಂತ್ರ ನಡೆಸಲಾಗಿದೆ ಎಂದು ದೂರಿದರು.

ಮದ್ದೂರು ಶಾಸಕ ಉದಯ್ ಕೂಡ ಟೀಕೆ ಮಾಡಿದ್ದಾರೆ. ಇವರೆಲ್ಲಾ ಯಾವುದೇ ಟೀಕೆ ಮಾಡಿದೆ ಇರದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದರು.

ಮುಖಂಡರಾದ ಶಿವಕುಮಾರಸ್ವಾಮಿ, ಉದ್ಬೂರು ಎಂ. ಸೋಮಣ್ಣ, ರಮ್ಮನಹಳ್ಳಿ ಮಂಜುನಾಥ್, ಶಿವಸ್ವಾಮಿ, ಆಲನಹಳ್ಳಿ ಪ್ರಕಾಶ್ ಇದ್ದರು.