ರೋಣ: ಕೆಆರ್‌ಐಡಿಎಲ್‌ಗೆ ನೀಡಿದ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದಿಲ್ಲ ಎಂದು ಸದಸ್ಯರು ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯ ಬಾಕಿ ಬಿಲ್ ಪಾವತಿ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸಂತೋಷ ಕಡಿವಾಲ, ನಿಗಮದ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಾಮಗಾರಿಗಳ ಪ್ರಗತಿಯ ಕುರಿತಾಗಿ ಮಾಹಿತಿ ಕೇಳಲು ಕರೆ ಮಾಡಿದರೆ, ಕರೆ ಸ್ವೀಕರಿಸುವುದಿಲ್ಲ. ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುತ್ತಿದ್ದಂತೆ ಸರ್ವ ಸದಸ್ಯರು ದನಿಗೂಡಿಸಿದರು. ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚಿಸಿ, ಬಿಲ್ ಪಾವತಿಸುವ ಬಗ್ಗೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಯಿತು.
ಬಾವಾಸಾಬ್ ಬೆಟಗೇರಿ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಚರಂಡಿ ತುಂಬಿ ಗಬ್ಬೆದ್ದು ನಾರುತ್ತಿವೆ. ಸ್ವಚ್ಛಗೊಳಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಪಂದಿಸುತ್ತಿಲ್ಲ. ನಮಗೆ ಮತ ಹಾಕಿದ ಜನರು ಛೀಮಾರಿ ಹಾಕುತ್ತಿದ್ದಾರೆ. ನಾವು ಜನರ ಕೆಲಸ ಮಾಡಲು ಆಯ್ಕೆಯಾಗಿದ್ದೇವೆ ಎಂದು ಮುಖ್ಯಾಧಿಕಾರಿ ತರಾಟೆಗೆ ತೆಗೆದುಕೊಂಡರು. ಗದಿಗೆಪ್ಪ ಕಿರೇಸೂರ ಮಾತನಾಡಿ, ಹಲವು ವಾರ್ಡ್‌ಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರೆ, ಸಂಗಪ್ಪ ಜಿಡ್ಡಿಬಾಗಿಲ ಮಾತನಾಡಿ, ಸಿಬ್ಬಂದಿ ಕೊರತೆ ಇದೆ ಎಂದು ಪ್ರತಿಬಾರಿ ಹೇಳುತ್ತೀರಿ. ಪುರಸಭೆ ಬಾಗಿಲು ಹಾಕಿಕೊಂಡು ಮನೆಗೆ ಹೋಗಿ ಇಲ್ಲವೇ ಸಿಬ್ಬಂದಿ ಕೈಯಲ್ಲಿ ಕೆಲಸ ತೆಗೆದುಕೊಳ್ಳಿ. ನಿಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ರಮೇಶ ಹೊಸಮನಿ, ಚರಂಡಿ ಸ್ವಚ್ಛಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತೆನೆ ಎಂದರು.
ಪುರಸಭೆಯ ವ್ಯಾಪ್ತಿಯ ಜಾಗಗಳನ್ನು ಹಡಪದ ಅಪ್ಪಣ್ಣ ಟ್ರಸ್ಟ್ ಕಮಿಟಿ, ಹೇಮರಡ್ಡಿ ಮಲ್ಲಮ್ಮ ಲಿಂಗಾಯತ ರಡ್ಡಿ ಸಮಾಜಕ್ಕೆ ನೀಡುವ ಕುರಿತು ಚರ್ಚೆ ನಡೆಸಲಾಯಿತು.
ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಸದಸ್ಯರಾದ ಮಿಥುನ್ ಪಾಟೀಲ, ವಿಜಯಲಕ್ಷ್ಮೀ ಕೊಟಗಿ, ಬಸಮ್ಮ ಕೊಪ್ಪದ, ರಂಗಮ್ಮ ಭಜಂತ್ರಿ, ಆನಂದ ಚಂಗಳಿ, ಜಗದೀಶ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.