ಜಿಲ್ಲೆ

ಚರ್ಚ್​ ಸ್ಟ್ರೀಟ್​ನಲ್ಲಿ ಮಹಿಳೆಯರ ವಿಡಿಯೋ ಮಾಡಿ ಇನ್​ಸ್ಟಾದಲ್ಲಿ ಪೋಸ್ಟ್​: ಅಶ್ಲೀಲ ಕಾಮೆಂಟ್​ಗಳಿಂದ ಕಣ್ಣೀರಿಟ್ಟ ಯುವತಿ​​! Bengaluru Women

Bengaluru Women : ಬೆಂಗಳೂರಿನ ಪ್ರತಿಷ್ಠಿತ ಚರ್ಚ್​ ಸ್ಟ್ರೀಟ್​ ಏರಿಯಾ ಸೇರಿದಂತೆ ನಗರದ ಇತರೆ ಭಾಗಗಳಲ್ಲಿ ಯುವತಿಯರು ನಡೆದಾಡುವುದನ್ನು ಅವರ ಅನುಮತಿಯಿಲ್ಲದೇ ವಿಡಿಯೋ ಮಾಡಿ, ಅದನ್ನು ರೀಲ್ಸ್ ರೂಪದಲ್ಲಿ ಹರಿಬಿಡುತ್ತಿರುವ ಬಗ್ಗೆ ಯುವತಿಯೊಬ್ಬಳು ಧ್ವನಿ ಎತ್ತಿದ್ದಾಳೆ.

ತನ್ನ ಒಪ್ಪಿಗೆಯಿಲ್ಲದೆ ತನ್ನನ್ನು ಚಿತ್ರೀಕರಿಸಲಾಗಿದೆ ಎಂದು ಹುಡುಗಿಯೊಬ್ಬಳು ಹೇಳಿಕೊಂಡಿದ್ದಾಳೆ. ಅಲ್ಲದೆ, ತನ್ನ ವಿಡಿಯೋ ನೋಡಿದ ಬಳಿಕ ಅದನ್ನು ಡಿಲೀಟ್​ ಮಾಡುವಂತೆ ಹಾಗೂ ವಿಡಿಯೋ ಅಪ್​​​ಲೋಡ್​ ಮಾಡಿದ ಖಾತೆಯ ವಿರುದ್ಧ ವರದಿ ಮಾಡುವಂತೆ ವಿನಂತಿ ಮಾಡಿದರೂ ಏನೂ ಬದಲಾಗಿಲ್ಲ. ಆ ರೀಲ್‌ನಿಂದಾಗಿ ನನಗೆ ಜನರಿಂದ ಅಶ್ಲೀಲ ಮೆಸೇಜ್​ಗಳು ಬರುತ್ತಿವೆ ಎಂದು ಯುವತಿ ಬೇಸರ ಹೊರಹಾಕಿದ್ದಾಳೆ.

ಆ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಹಲವಾರು ವಿಡಿಯೋಗಳಿವೆ. ಅದರಲ್ಲೂ ಹೆಚ್ಚಿನ ಮಹಿಳೆಯರು ತಮ್ಮತ್ತ ಕ್ಯಾಮೆರಾಗಳು ಫೋಕಸ್​ ಆಗಿರುವುದನ್ನು ನೋಡಿ ಒಂದು ಕ್ಷಣ ದಂಗಾಗುತ್ತಾರೆ. ಇನ್ನೂ ಹಲವಾರು ವಿಡಿಯೋಗಳನ್ನು ಅವರ ಅರಿವಿಗೆ ಬಾರದಂತೆ ಸೆರೆಹಿಡಿಯಲಾಗಿದೆ ಎಂದು ಯುವತಿ ಕಳವಳ ವ್ಯಕ್ತಪಡಿಸಿದ್ದಾಳೆ.

ಈ ವ್ಯಕ್ತಿ ಚರ್ಚ್ ಸ್ಟ್ರೀಟ್‌ನಲ್ಲಿ ಅವ್ಯವಸ್ಥೆಯನ್ನು ಚಿತ್ರೀಕರಿಸುವಂತೆ ನಟಿಸುತ್ತಾ ಓಡಾಡುತ್ತಾನೆ. ಆದರೆ, ವಾಸ್ತವದಲ್ಲಿ ಆತ ಮಾಡುವುದೆಲ್ಲಾ ಮಹಿಳೆಯರನ್ನು ಹಿಂಬಾಲಿಸಿ ಅವರ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡುವುದು. ಅದು ನನಗೂ ಸಂಭವಿಸಿದೆ ಮತ್ತು ಇತರ ಅನೇಕರನ್ನೂ ಚಿತ್ರೀಕರಿಸಿರುವ ಸಾಧ್ಯತೆ ಇದೆ. ನನ್ನ ಖಾತೆಯು ಸಾರ್ವಜನಿಕವಾಗಿ ಮುಕ್ತವಾಗಿದೆ ಎಂಬ ಕಾರಣಕ್ಕೆ ನಾನು ಸಾರ್ವಜನಿಕವಾಗಿ ಚಿತ್ರೀಕರಿಸಲು ಒಪ್ಪುತ್ತೇನೆ ಎಂದರ್ಥವಲ್ಲ. ನೀವು ವೀಕ್ಷಣೆಗಳನ್ನು ಗಳಿಸುವ ಅಥವಾ ಇನ್​ಸ್ಟಾಗ್ರಾಂನಲ್ಲಿ ತೊಡಗಿಸಿಕೊಳ್ಳುವ ವಿಧಾನ ಇದಲ್ಲ. ಈ ವ್ಯಕ್ತಿ ಖಂಡಿತ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆಂದು ನಾನು ಭಾವಿಸುತ್ತೇನೆ ಎಂದು ಯುವತಿ ತನ್ನ ಇನ್​ಸ್ಟಾಗ್ರಾಂ ವಿಡಿಯೋದಲ್ಲಿ ವಿವರಿಸಿದ್ದಾಳೆ.

ಆ ಯುವತಿ, ಬೆಂಗಳೂರು ಪೊಲೀಸರಿಗೆ ವಿಡಿಯೋವನ್ನು ಟ್ಯಾಗ್​ ಸಹ ಮಾಡಿದ್ದಾಳೆ. ದಯವಿಟ್ಟು ಈ ವಿಡಿಯೋವನ್ನು ತೆಗೆದುಹಾಕಲು ನನಗೆ ಸಹಾಯ ಮಾಡಿ. ನಾನು ಖಾತೆಯನ್ನು ವರದಿ ಮಾಡಿರುವುದರಿಂದ ಆ ಖಾತೆಯನ್ನು ಉಲ್ಲೇಖಿಸಲು ಅಥವಾ ಟ್ಯಾಗ್ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಆದರೆ, ಖಾತೆಯ ಬಳಕೆದಾರನ ಹೆಸರು ವಿಡಿಯೋದಲ್ಲಿದೆ ಎಂದು ಯುವತಿ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದಾಳೆ.

ಅಂದಹಾಗೆ, ಈ ಪೋಸ್ಟ್‌ಗೆ ಬೆಂಗಳೂರು ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)