ನಂಜನಗೂಡು: ಪಿಡಿಒ ಅಮಾನತುಗೊಳಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಹೆಗ್ಗಡಹಳ್ಳಿ ಹಾಗೂ ಹೆಡಿಯಾಲ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ನಾಗರಾಜು ಅವರನ್ನು ಅಮಾನತುಗೊಳಿಸುವಂತೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಸಂಘಟನೆಯ ಕಾರ್ಯಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ಹೆಡಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರ್ವತಿಪುರ ಗ್ರಾಮದ ಮಾರಿಯಮ್ಮ ಎಂಬ ವೃದ್ಧೆಯೊಬ್ಬರಿಗೆ 11 ಬಿ ಖಾತೆ ಮಾಡಿಸಿಕೊಡಲು 25 ಸಾವಿರ ಲಂಚ ಪಡೆದಿದ್ದಾರೆ. ಹಣವನ್ನು ಪಡೆಯುವುದರ ಜತೆಗೆ ಬೇರೆಯವರ ಹೆಸರಿಗೆ ಇವರ ಜಾಗವನ್ನು ಖಾತೆ ಮಾಡಿಕೊಟ್ಟಿದ್ದಾರೆ. ಹೆಡಿಯಾಲ ಗ್ರಾಮದಲ್ಲಿ ಕನಕ ಭವನಕ್ಕೆ ಸೇರಬೇಕಾದ ಜಾಗವನ್ನು ಬೇರೆ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದರು. ಕಳಲೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಹಲವು ಭ್ರಷ್ಟಾಚಾರವನ್ನು ಮಾಡಿದ್ದಾರೆ. ಪ್ರಸ್ತುತ ಈಗ ಹೆಗ್ಗಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ ಜಾಗವನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದು ಕಂಡುಬಂದಿದೆ. ಪಿಡಿಒ ಯಾವುದೇ ಜಾಗಕ್ಕೆ ತೆರಳಿದರೂ ಭ್ರಷ್ಟಾಚಾರ ಮಾಡುವುದು ಮುಂದುವರಿಯುತ್ತಿದೆ. ಇವರು ಯಾವಾಗಲೂ ನಾನು ಹದಿನಾರು ಗ್ರಾಮದವನು. ಜಿಲ್ಲಾ ಉಸ್ತುವಾರಿ ಸಚಿವರು ನನ್ನ ಆತ್ಮೀಯರು. ನಾನು ಏನೇ ಮಾಡಿದರು ಎಚ್.ಸಿ ಮಹದೇವಪ್ಪನವರ ಬೆಂಬಲ ಇದೆ ಎನ್ನುವ ಉಡಾಫೆ ಮಾತುಗಳನ್ನು ಆಡುತ್ತಾರೆ. ಉಸ್ತುವಾರಿ ಸಚಿವರು ಇಂತಹ ಪಿಡಿಒಗಳು ನಂಜನಗೂಡಿಗೆ ಅವಶ್ಯಕತೆ ಇಲ್ಲ. ಬಡವರ ರಕ್ತ ಹೀರುತ್ತಿರುವ ಇಂತಹ ಪಿಡಿಒಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘ ತಾಲೂಕು ಅಧ್ಯಕ್ಷ ಸತೀಶ್ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಸರ್ವಾಧಿಕಾರಿ ಧೋರಣೆಗಳನ್ನು ಪಿಡಿಒಗಳು ತೋರಿಸುತ್ತಿದ್ದಾರೆ. ಹೆಗ್ಗಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುಳ್ಳು ದಾಖಲೆ ಸೃಷ್ಟಿ ಮಾಡಿ ಸಾರ್ವಜನಿಕ ದಾರಿಯನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಒಂದು ಕಡೆ ದಾಖಲೆ ಇದೆ ಎನ್ನುತ್ತಾರೆ. ಮತ್ತೊಂದು ಕಡೆ ದಾಖಲೆ ಇಲ್ಲ ಎಂದು ತೋರಿಸುತ್ತಾರೆ. ಎಲ್ಲಾ ದಾಖಲೆ ಇದ್ದವರಿಗೆ ಕೂಡ ಇವರು ಕೆಲಸ ಕಾರ್ಯಗಳನ್ನು ಮಾಡಿಕೊಡದೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಇಒ ಜೆರಾಲ್ಡ್ ರಾಜೇಶ್ ಭೇಟಿ ನೀಡಿ, ಪ್ರತಿಭಟನಾನಿರತರ ಸಮಸ್ಯೆಗಳನ್ನು ಆಲಿಸಿ ಸ್ಥಳಕ್ಕೆ ಹೆಗ್ಗಡಹಳ್ಳಿ ಮತ್ತು ಹೆಡಿಯಾಲ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ನಾಗರಾಜ್ ಅವರನ್ನು ಸ್ಥಳಕ್ಕೆ ಕರೆಸಿ ರೈತರ ಆರೋಪದ ಸಂಬಂಧ ವಿಚಾರಣೆ ನಡೆಸಿದರು. ನಂತರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.
ಇಮ್ಮಾವು ರಘು, ಸತೀಶ್ ರಾವ್, ಶ್ವೇತಾ, ಉಪ್ಪಿನಹಳ್ಳಿ ದೇವರಾಜು, ರವಿ, ಶಂಕರ್ ನಾಯ್ಕ, ಮಹದೇವ ನಾಯಕ, ಮಹದೇವಸ್ವಾಮಿ, ಪ್ರಕಾಶ್, ಆನಂದ್, ಮಹೇಶ್, ಶಿವಕುಮಾರ್, ಸಿದ್ದರಾಜು, ಸಿದ್ಧರಾಮ ಸೇರಿದಂತೆ ಇತರರು ಹಾಜರಿದ್ದರು.