ಜಿಲ್ಲೆ

ಸಂಘಟಕರನ್ನು ನಿರ್ಲಕ್ಷ್ಯಿಸಿ ಯುವಜನೋತ್ಸವ: ನ.29ರಂದು ಮಂಡ್ಯ ನಗರದಲ್ಲಿ ಯುವ ಪ್ರಶಸ್ತಿ ಪುರಸ್ಕೃತರಿಂದ ಪ್ರತಿಭಟನೆ

ಮಂಡ್ಯ: ಯುವ ಸಂಘಟಕರು, ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಯುವ ಪರಿಷತ್ ಸಂಘಟನೆಯನ್ನು ನಿರ್ಲಕ್ಷ್ಯಿಸಿ ಜಿಲ್ಲಾ ಯುವ ಜನೋತ್ಸವ ಮಾಡಲೊರಟಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಓಂಪ್ರಕಾಶ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು ಆಗ್ರಹಿಸಿದರು.

ಜಿಲ್ಲೆಯಲ್ಲಿ ಯುವಜನ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಯುವ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ನ.29ರಂದು ಕಲಾಮಂದಿರದಲ್ಲಿ ಆಯೋಜಿಸಿರುವ ಯುವಜನೋತ್ಸವ ಕಾರ್ಯಕ್ರಮವನ್ನು ಮುಂದೂಡಬೇಕೆಂದು ಆಗ್ರಹಿಸಿ ಅಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಯುವ ಪ್ರಶಸ್ತಿಗಳನ್ನು ಪಡೆದುಕೊಂಡು ಯುವಜನರ ಚಟುವಟಿಕೆಗಳನ್ನು ಮುನ್ನಡೆಸಲು ಶ್ರಮಿಸುತ್ತಿರುವ ಯುವ ಪ್ರಶಸ್ತಿ ಪುರಸ್ಕೃತರು ಮತ್ತು ಯುವಜನ ಸಂಘಟಕರು ಈ ನಾಡಿಗೆ ಮಾದರಿಯಾಗಿದ್ದಾರೆ. ಹಿರಿಯ ಅನುಭವಿಗಳ ಮಾರ್ಗದರ್ಶನದಲ್ಲಿ ಮುಂದಿನ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವ ಸಂಘಟಕರು ಮತ್ತು ಪ್ರಶಸ್ತಿ ಪುರಸ್ಕೃತರು ಒಗ್ಗೂಡಿ ಮಂಡ್ಯ ಜಿಲ್ಲಾ ಯುವ ಪರಿಷತ್‌ನ್ನು ಅಸ್ತಿತ್ವಕ್ಕೆ ತರಲಾಗಿದೆ. ಹೀಗಿರುವಾಗ ಜಿಲ್ಲಾ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ನಮ್ಮೆಲ್ಲರನ್ನು ಹೊರಗಿಟ್ಟು ಬೇಕಾಬಿಟ್ಟಿಯಾಗಿ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ನಮ್ಮ ಮನವಿಯನ್ನು ಕಸದ ಬುಟ್ಟಿಗೆ ಹಾಕಿ, ದರ್ಪ ಉದ್ಘಟತನ ಸ್ವಜನ ಪಕ್ಷಪಾತ ಮಾಡುತ್ತಿರುವ ಓಂಪ್ರಕಾಶ್ ಅವರು ಸರ್ಕಾರದ ಹಣ ದೋಚುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಪರಿಷತ್‌ನ ಖಜಾಂಚಿ ಅರುಣಾ ಕೆಂಪರಾಜು, ಪ್ರಧಾನ ಕಾರ್ಯದರ್ಶ ಸುಕನ್ಯಾ ರಂಗನಾಥ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಕೋ.ಪು.ಗುಣಶೇಖರ್, ನಾಗರತ್ನ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತೆ ಯಶೋಧಗೌಡ, ಸುರೇಶ್ ಹಾಜರಿದ್ದರು.