ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು ವಿರೋಧಿಸಿ ಗುರುವಾರ ಶಿವಾನಂದ ಜಿನ್‌ನಲ್ಲಿ ನಡೆದ ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ಮಾಜಿ ಎಂಎಲ್ಸಿ ನಾರಾಯಣಸಾ ಭಾಂಡಗೆ, ಬಸವರಾಜ ಯಂಕಂಚಿ, ಸದಾನಂದ ನಾರಾ, ಜಿ.ಎನ್.ಪಾಟೀಲ ಇತರರು ಇದ್ದಾರೆ.  
ಜಿಲ್ಲೆ

ಶಿವಾಜಿ ಮೂರ್ತಿ ತೆರವಿಗೆ ಕಾಂಗ್ರೆಸ್ ವಿರುದ್ಧ ಆಕ್ರೋಶ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಬುಧವಾರ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಿದ ಬಳಿಕ ಬಿಜೆಪಿ, ಹಿಂದು ಸಂಘಟನೆ ಮುಖಂಡರನ್ನು ವಶಕ್ಕೆ ತೆಗೆದುಕೊಂಡು ಶಿವಾಜಿ ಮೂರ್ತಿ ತೆರವು ಮಾಡಿರುವ ಪ್ರಕರಣ ಇದೀಗ ಬಿಜೆಪಿ ಹಾಗೂ ಹಿಂದು ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವಿಚಾರವಾಗಿ ಗುರುವಾರ ಶಿವಾನಂದ ಜಿನ್‌ನಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಮಾಜಿ ಎಂಎಲ್ಸಿ ನಾರಾಯಣಸಾ ಭಾಂಡಗೆ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಶಿವಾಜಿ ಮೂರ್ತಿ ತೆರವು ಖಂಡಿಸಿ ಹೋರಾಟ ರೂಪಿಸಲು ನಿರ್ಧಾರ ಮಾಡಲಾಯಿತು. ಬಾಗಲಕೋಟೆ ಬಂದ್‌ಗೂ ಕರೆ ನೀಡಲು ತೀರ್ಮಾನಿಸಲಾಯಿತು.

ಆದರೆ, ಶುಕ್ರವಾರ ನಗರಕ್ಕೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆಗಮಿಸುತ್ತಿದ್ದು, ಅವರ ಅಭಿಪ್ರಾಯವನ್ನು ಪಡೆಯುವುದು ಹಾಗೂ ನಗರದ ವಿವಿಧ ಸಮಾಜ ಮುಖಂಡರ ಸಭೆಯನ್ನು ನಡೆಸಿ ಬಂದ್ ಯಾವಾಗ ಎಂದು ನಿರ್ಧಾರ ಮಾಡಲು ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಶಿವಾಜಿ ಮೂರ್ತಿ ತೆರವು ಮಾಡುವ ಮೂಲಕ ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ಮೂರ್ತಿ ಪ್ರತಿಷ್ಠಾಪನೆಗೆ ಯಾವುದೇ ವಿರೋಧ ಇರಲಿಲ್ಲ. ಆದರೆ, ಸುಪ್ರೀಂಕೋರ್ಟ್ ತೀರ್ಪು ಎಂದೇಳಿ ತೆರವು ಮಾಡಿದ್ದಾರೆ. ಹಾಗಾದರೆ ಸುಪ್ರೀಂಕೋರ್ಟ್ ಪ್ರಕಾರ ಈಗ ಇರುವ ವಿವಿಧ ಪುತ್ಥಳಿಗಳನ್ನು ತೆರವು ಮಾಡಿದ್ದಾರಾ? ಮಸೀದಿಯಲ್ಲಿ ಆಜಾನ್ ಹಚ್ಚುವುದು ನಿಲ್ಲಿಸಿದ್ದಾರಾ? ಶಿವಾಜಿ ಮೂರ್ತಿ ಬಗ್ಗೆ ಅಷ್ಟೇ ಏಕೆ ಈ ಕ್ರಮ ಎಂದು ನಾರಾಯಣಸಾ ಭಾಂಡಗೆ ಪ್ರಶ್ನಿಸಿದರು.

ನಿಗದಿತ ಜಾಗದಲ್ಲಿ 18 ಅಡಿ ಶಿವಾಜಿ ಪುತ್ಥಳಿಯನ್ನು ಅನಾವರಣ ಮಾಡಿಯೇ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದು ವಿರೋಧಿ ನಿಲುವು ವ್ಯಕ್ತವಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಇನ್ನು ಮಾಧ್ಯಮಗಳ ಜತೆಗೆ ಮಾತನಾಡಿದ ಮಾಜಿ ಶಾಸಕ ವೀರಣ್ಣ ಚರಂತಿಮಠ ಸಹ, ಬುಧವಾರ ರಾತ್ರಿ ಕೆಲವರ ಕುತಂತ್ರದಿಂದ ಏಕಾಏಕಿ ಶಿವಾಜಿ ಮೂರ್ತಿ ತೆರವುಗೊಳಿಸಿದ್ದಾರೆ. ಇದನ್ನು ಖಂಡಿಸಿ ನಾಳೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಿವಿಧ ಸಮುದಾಯಗಳ ಮುಖಂಡರ ಜತೆ ಸಭೆ ನಡೆಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದರು.

ಈಗ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಜಾಗದ ಬಗ್ಗೆ ಯಾವುದೇ ವಿವಾದ ಇರಲಿಲ್ಲ. ರಸ್ತೆಯಲ್ಲಿ ಇಟ್ಟಿರಲಿಲ್ಲ. ಮೂರ್ತಿ ತೆಗೆಸುವ ಹೇಸಿ ಕೆಲಸವನ್ನು ಕೆಲವರು ಮಾಡಿದ್ದಾರೆ. ಅದಕ್ಕೆ ತಕ್ಕ ಶಾಸ್ತಿ ಆಗುತ್ತದೆ. ನವನಗರದಲ್ಲಿ ಮನೆಗೆಂದು ಕೊಟ್ಟಿದ್ದ ಜಾಗದಲ್ಲಿ ಕೆಲವರು ಮಸೀದಿ ನಿರ್ಮಿಸಿದ್ದಾರೆ. ಅವುಗಳ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ ಚರಂತಿಮಠ, ಇವರಿಗೆ ಛತ್ರಪತಿ ಶಿವಾಜಿ ಮೂರ್ತಿ ಮಾತ್ರ ಕಾಣಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ತಕ್ಕ ರೂಪದ ಹೋರಾಟ ಮಾಡುತ್ತೇವೆ. ನಾವು ಪೊಲೀಸ್ ಠಾಣೆಯಲ್ಲಿ ಸಭೆ ನಡೆಸುತ್ತಿದ್ದಾಗ ಇತ್ತ ಮೂರ್ತಿ ತೆರವು ಮಾಡಿದ್ದಾರೆ. ಇದು ಹಿಂದು ಸಮಾಜಕ್ಕೆ ಆಗಿರುವ ಅವಮಾನ ಎಂದು ಭಾವಿಸಿ ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳ ಎನ್ನುವ ಆಡಳಿತ ವರ್ಗ, ಹಾಗಾದರೆ ಜಿಲ್ಲೆಯ ಮುಧೋಳ, ಬಾಗಲಕೋಟೆ, ಲೋಕಾಪುರ, ಹುನಗುಂದ ಹೀಗೆ ಬೇರೆ ಬೇರೆ ಕಡೆ ಮೂರ್ತಿಗಳೆಲ್ಲ ಸಾರ್ವಜನಿಕ ಸ್ಥಳದಲ್ಲೇ ಇವೆ. ಆದರೆ, ಇಲ್ಲಿ ಯಾರೋ ಕೆಲವರ ಕುಮ್ಮಕ್ಕಿನಿಂದ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಹಾಗೂ ಹಿಂದು ಸಂಘಟನೆ ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯ್ಕರ್, ಬಸಲಿಂಗಪ್ಪ ನಾವಲಗಿ, ಜಿ.ಎನ್.ಪಾಟೀಲ, ಪ್ರಭು ಹಡಗಲಿ, ನಗರಸಭೆ ಬಿಜೆಪಿ ಸದಸ್ಯರು ಸೇರಿ ಹಲವರು ಇದ್ದರು.

ಮಂದಿರ, ಮಸೀದಿ, ಕಾಂಗ್ರೆಸ್ ಕಚೇರಿಗೆ ಭದ್ರತೆ

ಅನಧಿಕೃತವಾಗಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಬುಧವಾರ ರಾತ್ರಿ ಮೂರ್ತಿ ತೆರವುಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ಮುಂಜಾಗ್ರತೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳಾದ ವಿವಿಧ ಮಂದಿರ, ಮಸೀದಿಗಳ ಎದುರು ಪೊಲೀಸ್ ಕಾವಲು ಹಾಕಿದ್ದಾರೆ. ನವನಗರದಲ್ಲಿ ಇರುವ ಕಾಂಗ್ರೆಸ್ ಜಿಲ್ಲಾ ಕಚೇರಿ ಹಾಗೂ ಮೂರ್ತಿ ತೆರವು ಮಾಡಿರುವ ಜಾಗದಲ್ಲೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಜಿಲ್ಲಾಡಳಿತಕ್ಕೆ ಹಿಂಜಾವೇ ಮನವಿ

ಶಿವಾಜಿ ಮೂರ್ತಿ ತೆರವುಗೊಳಿಸಿರುವುದನ್ನು ಖಂಡಿಸಿ ಗುರುವಾರ ಸಂಜೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ನೂರಾರು ಜನರ ಪ್ರತಿಭಟನೆ ಹತ್ತಿಕ್ಕಿ ಪೊಲೀಸ್ ಬಲವನ್ನು ಬಳಕೆ ಮಾಡಿಕೊಂಡು ಜಿಲ್ಲಾಡಳಿತವೂ ಹಠಕ್ಕೆ ಬಿದ್ದು ಮೂರ್ತಿ ತೆರವು ಮಾಡಿದೆ. ಕೂಡಲೇ ತೆರವು ಮಾಡಿರುವ ಜಾಗದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಗೌರವಯುತವಾಗಿ ಮರಳಿಸಬೇಕು. ಇಲ್ಲವಾದಲ್ಲಿ ಹಿಂದು ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.