ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗೆ ಅಧಿಕಾರಿಗಳ ಗೈರು ವಿರೋಧಿಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. 
ಜಿಲ್ಲೆ

ಗೈರಾದ ಅಧಿಕಾರಿಗಳ ವಿರುದ್ಧ ಆಕ್ರೋಶ

ಶಿವಶಂಕರ್ ಎಂ. ಹೆಬ್ಬಳ್ಳ

ಗುಂಡ್ಲುಪೇಟೆ : ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಸರ್ಕಾರಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂಬ ನಿಯಮವಿದ್ದರೂ ಗೈರಾಗುವ ಮೂಲಕ ಸಮುದಾಯಕ್ಕೆ ಅಪಮಾನ ಎಸಗಲಾಗಿದೆ ಎಂದು ಮುಖಂಡರು ಆಕ್ರೋಶ ಹೊರಹಾಕಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಗುಚ್ಛವಿರಿಸಿ ಅಪಮಾನ ಎಸಗಲಾಗಿದೆ. ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರನ್ನು ಆಹ್ವಾನಿಸಿ ಅಪಮಾನಿಸಲಾಗಿದೆ. ರಾಜಕಾರಣಿಗಳು ನಮ್ಮನ್ನು ತುಳಿಯುವ ಕೆಲಸ ಮಾಡುತ್ತಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದರು ದೂರಿದರು.

ಶಿಷ್ಟಾಚಾರದಂತೆ ಜಯಂತ್ಯುತ್ಸವದಲ್ಲಿ ಅಧಿಕಾರಿ ವೃಂದ ಹಾಜರಿರಬೇಕು ಎಂಬ ನಿಯಮವಿದೆ. ಆದರೆ ಭಾಗವಹಿಸಿದ್ದು ಮಾತ್ರ ಮೂವರು ಅಧಿಕಾರಿಗಳು. ತಹಸೀಲ್ದಾರ್ ತನ್ಮಯ್, ಪಿಎಸ್‌ಐ ಸಾಹೇಬೆಗೌಡ, ಬಿಇಒ ಟಿ.ಆರ್.ಸ್ವಾಮಿ , ಕಾರ್ಮಿಕ ನಿರೀಕ್ಷಕ ನಾರಾಯಣ ಸ್ವಾಮಿ ಅವರನ್ನು ಬಿಟ್ಟರೆ ಬೇರೆ ಯಾವೊಬ್ಬ ಅಧಿಕಾರಿಯು ಭಾಗವಹಿಸಿರಲಿಲ್ಲ. ಇದು ನಮ್ಮ ಸಮುದಾಯಕ್ಕೆ ಹಾಗೂ ವಿಶ್ವಕರ್ಮ ಮಹರ್ಷಿಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಮುಖಂಡ ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದರು.