ಶ್ರೀರಂಗಪಟ್ಟಣ: ಕನ್ನಂಬಾಡಿಯಿಂದ ತಮಿಳುನಾಡಿಗೆ ಕಾವೇರಿ ನೀರು ಮಾತ್ರವಲ್ಲ. ಕರ್ನಾಟಕದ ಕಾವೇರಿ ಕಣಿವೆಯ ಭತ್ತದ ಪೈರನ್ನು ನದಿ ಮೂಲಕ ಅರ್ಪಿಸುತ್ತಿದ್ದು, ನಮ್ಮ ರೈತರ ಕಣ್ಣೀರಿನ ನೋವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಟ್ಟಲಿ ಎಂದು ರೈತ ಹೋರಾಟಗಾರರು ಬಾಯಿ ಬಡಿದು ಶಪಿಸಿದರು….!
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶನಿವಾರ ತಾಲೂಕು ಕಚೇರಿ ಮಾರ್ಗವಾಗಿ ಸ್ನಾನಘಟ್ಟದವರೆಗೂ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಮೆರವಣಿಗೆ ಮೂಲಕ ಕೈಯಲ್ಲಿ ಭತ್ತದ ಪೈರು ಹಿಡಿದು ಆಗಮಿಸಿದ ರಾಜ್ಯ ರೈತ ಸಂಘದ ಕಾರ್ಯಕರ್ತರು, ಅಸಹಾಯಕತೆಯಿಂದ ಕಾವೇರಿ ನದಿಯ ನೀರಿಗೆ ಹಾಕಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ರಾಜ್ಯ ಹಾಗೂ ಕೇಂದ್ರ ಸರ್ಕಾರ, ಸಂಸದರ ವಿರುದ್ದ ಸಾಲು ಸಾಲು ಘೋಷಣೆ ಕೂಗಿದರು.
ಬಳಿಕ ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ಮಾತನಾಡಿ, ಕೆಆರ್‌ಎಸ್ ಜಲಾಶಯವಿರುವ ನೆಲದಲ್ಲೇ ಈ ಭಾರಿ ಕೃಷಿಗೆ ಅಗತ್ಯ ಕಾವೇರಿ ನೀರು ಸಿಗದೆ ಬರಗಾಲ ಆವರಿಸಿದೆ. ಇನ್ನು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿ ಮಾಡಿರುವ ರೈತರು ಇದೀಗ ನೀರು ಸಿಗದೆ ಬೆಳೆ ಒಣಗುವ ಆತಂಕ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾರಣ ನವೆಂಬರ್, ಡಿಸೆಂಬರ್ ವೇಳೆಗೆ ಕನ್ನಂಬಾಡಿ ನೀರಿನ ಸಂಗ್ರಹ ಕ್ಷೀಣಿಸಲಿದ್ದು, ಕುಡಿಯುವ ನೀರಿಗೆ ಅಭಾವ ಎದುರಾಗಿ ಕೃಷಿಗೆ ನೀರು ಬಿಡಲು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಿಲ್ಲ. ನಮ್ಮ ರೈತರ ಬದುಕ ಕಸಿದು ಕೇವಲ ತಮಿಳುನಾಡು ಪರ ನಿಂತ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ತುಟಿ ಬಿಚ್ಚದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಮ್ಮ ಶಾಪ ತಟ್ಟಲಿದ್ದು, ಮುಂದೆ ತಕ್ಕ ಶಾಸ್ತಿಯಾಗಲಿದೆ ಎಂದರು.
ಹಿರಿಯ ಮುಖಂಡರಾದ ಶ್ರೀಕಂಠಯ್ಯ, ಪಾ.ಲ ರಾಮೇಗೌಡ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಂಕರ್, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ಹಿರಿಯ ಮುಖಂಡರಾದ ಕಡತನಾಳು ಬಾಲಕೃಷ್ಣ, ಎಂ.ಶೆಟ್ಟಹಳ್ಳಿ ಪುರುಷೋತ್ತಮ್, ನೆಲಮನೆ ಕಾಳೇಗೌಡ್ರು, ತಡಗವಾಡಿ ನಿಂಗೇಗೌಡ, ದರಸಗುಪ್ಪೆ ಸೋಮಣ್ಣ, ಮಹದೇವಪುರ ಕೇಶವ, ರೇಡಿಯೋ ರಮೇಶ್, ಕರುನಾಡು ಹೋರಾಟ ಪಡೆ ಅಧ್ಯಕ್ಷೆ ಪ್ರಿಯಾ ರಮೇಶ್, ಸಾಮಾಜಿಕ ಹೋರಾಟಗಾರ್ತಿ ಅಮ್ರಿನ್ ತಾಜ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.