ಜಿಲ್ಲೆ

100 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ರೂಪುರೇಷೆ

ಬಿಡದಿ: ಪುರಸಭೆ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 2 ಕೋಟಿ ರೂ., ಯುಜಿ ಕೇಬಲ್​ ಕಾಮಗಾರಿಗೆ 45 ಕೋಟಿ ರೂ. ಹಾಗೂ ನಲ್ಲಿಗುಡ್ಡೆ ಕೆರೆಯನ್ನು ಪ್ರವಾಸಿ ತಾಣವಾಗಿಸಲು ಪಾರ್ಕ್​, ವಾಕಿಂಗ್​ ಪಾಥ್​ ನಿರ್ಮಾಣಕ್ಕೆ 10 ಕೋಟಿ ರೂ. ಸೇರಿ 100 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಹೇಳಿದರು.

5 ಕೋಟಿ ರೂ. ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಲ್ಲಿನ ಬಿಜಿಎಸ್​ ವೃತ್ತದಲ್ಲಿಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನವೆಂಬರ್​ನಲ್ಲಿ ಸಿಎಂ, ಡಿಸಿಎಂ ಹಾಗೂ ಉಸ್ತುವಾರಿ ಸಚಿವರಿಂದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ರೈತರಿಗೆ ಅನ್ಯಾಯ ಮಾಡಲ್ಲ

ಬಿಡದಿ ಸ್ಮಾರ್ಟ್​ ಸಿಟಿ ವಿಚಾರವಾಗಿ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ರೈತರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ರೈತರ ಆಶಯದಂತೆ ಅವರ ಭೂಮಿಗೆ ಹೆಚ್ಚಿನ ದರ ನಿಗದಿ ಮಾಡಿ ನ್ಯಾಯ ಕೊಡಿಸಲಾಗುವುದು ಎಂದರು.

ನಾಮನಿ ಸದಸ್ಯರಾದ ರಮೇಶ್​, ರೇಣುಕಯ್ಯ, ಮುಖಂಡರಾದ ಬೆಟ್ಟಸ್ವಾಮಿ, ಕುಮಾರ್​, ಮುಖ್ಯಾಧಿಕಾರಿ ಮೀನಾ ಇದ್ದರು.

ಕುಮಾರಸ್ವಾಮಿ ಕನಸು ನನಸಾಗಲಿದೆ!

ಬೆಂಗಳೂರು ಮಹಾನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಎಚ್​.ಡಿ.ಕುಮಾರಸ್ವಾಮಿ ಅವರು ಬಿಡದಿ ಟೌನ್​ಶಿಪ್​ ಯೋಜನೆಯನ್ನು ಒಪ್ಪಿಕೊಂಡಿದ್ದು, ಸ್ಮಾರ್ಟ್​ ಸಿಟಿಗೆ ಭೂಮಿ ನೀಡುವ ರೈತರಿಗೆ ಶೇ.40ರಷ್ಟು ಹೆಚ್ಚು ಪರಿಹಾರ ನೀಡಬೇಕು ಎಂದಿದ್ದಾರೆ. ಕುಮಾರಸ್ವಾಮಿ ಅವರು ಹೇಳಿದ ಬೆಲೆಗೆ ಇನ್ನೂ 10 ಸೇರಿಸಿ ಶೇ.50ರಷ್ಟು ಹೆಚ್ಚುವರಿ ಪರಿಹಾರವನ್ನು ಡಿಸಿಎಂ ಶಿವಕುಮಾರ್​ ನೀಡಲಿದ್ದಾರೆ. ಆ ಮೂಲಕ ಕುಮಾರಸ್ವಾಮಿ ಅವರ ಕನಸ್ಸನ್ನು ನನಸ್ಸು ಮಾಡುತ್ತೇವೆ ಎಂದು ಬಾಲಕೃಷ್ಣ ಟಾಂಗ್​ ನೀಡಿದರು.

ಎಚ್​.ಡಿ.ಕೆ ಕುಟುಂಬದಿಂದ ಬೇನಾಮಿ ಆಸ್ತಿ

ಸ್ಮಾರ್ಟ್​ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಮೊದಲು ಇಲ್ಲಿ ಭೂಮಿ ಗುರುತಿಸಿ ರೆಡ್​ ಜೋನ್​ ಮಾಡಿದ್ದು ಇದೇ ಕುಮಾರಸ್ವಾಮಿ ಅವರು. ಬೇನಾಮಿ ಆಸ್ತಿ ಮಾಡಿರುವವರು ಯಾರು ? ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅವರು ಒಪ್ಪಿಕೊಳ್ಳದಿದ್ದರೂ ಬೇನಾಮಿ ಆಸ್ತಿ ಮಾಡಿರುವವರು ಯಾರೆಂದು ಅವರ ಶ್ರೀಮತಿಯವರು ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ ಬರೆದಿರುವ ಪತ್ರದಿಂದ ಗೊತ್ತಾಗುತ್ತದೆ ಎಂದು ಬಾಲಕೃಷ್ಣ ಕುಟುಕಿದರು.