ಗಂಗೊಳ್ಳಿ: ನಮ್ಮ ಊರು ನಮ್ಮ ರಸ್ತೆ ಅಭಿಯಾನದ ಮೂಲಕ ರಸ್ತೆಯಲ್ಲಿನ ಹೊಂಡ ಗುಂಡಿಗಳನ್ನು ಮುಚ್ಚಿದ ಸಮಾನ ಮನಸ್ಕ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರತಿನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದಲ್ಲದೆ, ಅನೇಕ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು, ಶಾಲಾ ಕಾಲೇಜು, ಆರೋಗ್ಯ ಕೇಂದ್ರಗಳಿಗೆ ಸಾವಿರಾರು ಜನರು ಪ್ರತಿನಿತ್ಯ ಇದೇ ರಸ್ತೆ ಅವಲಂಬಿಸಿದ್ದು, ಬೃಹತ್ ಗಾತ್ರದ ಹೊಂಡ ಗುಂಡಿಗಳಿಂದ ಬೇಸತ್ತು ಗುಜ್ಜಾಡಿ ಗ್ರಾಮದ ಸಮಾನ ಮನಸ್ಕ ಯುವಕ ತಂಡ ಕೆಲ ದಿನಗಳ ಹಿಂದೆ ಹೊಂಡ ಗುಂಡಿ ಮುಚ್ಚಿ, ಜನರ ತೊಂದರೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು. ವಿಜಯವಾಣಿ ಕೂಡ ತ್ರಾಸಿ-ಗಂಗೊಳ್ಳಿ ಮುಖ್ಯರಸ್ತೆ ಅವ್ಯವಸ್ಥೆ ಬಗ್ಗೆ ಸಚಿತ್ರ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ರಾಮಣ್ಣ ಗೌಡ ಹಾಗೂ ಎಇ ಮಹಾಬಲ ನಾಯ್ಕ ಹಾಗೂ ವರ್ಕ್ ಇಂಜಿನಿಯರ್ ಮೂರ್ತಿ ಎಂಬುವರು ಎರಡು ಬಾರಿ ತ್ರಾಸಿ-ಗಂಗೊಳ್ಳಿ ಮುಖ್ಯ ರಸ್ತೆಯ ಹಾನಿಗೊಳಗಾದ ಭಾಗಗಳಿಗೆ ಭೇಟಿ ನೀಡಿ ರಸ್ತೆ ದುರಸ್ಥಿಪಡಿಸುವ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಹೊಂಡ ಗುಂಡಿ ಮುಚ್ಚುವ ಯಾವುದೇ ಕೆಲಸ ಆಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಕೊಡದ ಕಾರಣ ಸ್ಥಳೀಯ ಸಮಾನ ಮನಸ್ಕರು ತಂಡದ ಸದಸ್ಯರು ನಮ್ಮ ಊರು ನಮ್ಮ ರಸ್ತೆ ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.
ಈಗಾಗಲೇ ನಾಯಕವಾಡಿಯಿಂದ ಗುಜ್ಜಾಡಿವರೆಗಿನ ಮುಖ್ಯರಸ್ತೆಯ ಹೊಂಡಗಳಿಗೆ ಹೆಂಚಿನ ಹುಡಿ ಹಾಕಿ ಹೊಂಡ ಮುಚ್ಚುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಆಡಳಿತ ವ್ಯವಸ್ಥೆ ನಿರ್ಲಕ್ಷೃಕ್ಕೆ ಸೆಡ್ಡು ಹೊಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.