ಜಿಲ್ಲೆ

ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ ಪುಸ್ತಕ ಬಿಡುಗಡೆ

ಆದರ್ಶ್. ಎಂ.ಕೆ.

ಮಡಿಕೇರಿ: ಲೇಖಕ ಬಾಳೆಯಡ ಕಿಶನ್ ಪೂವಯ್ಯ ಅವರು ರಚಿಸಿರುವ ಕೊಡವ ಮಕ್ಕಡ ಕೂಟದ ೧೧೮ನೇ ಪುಸ್ತಕ ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ ಬಿಡುಗಡೆಗೊಂಡಿತು.

ನಗರದ ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿ, ಪುಸ್ತಕಕ್ಕೆ ಹೆಚ್ಚು ಜನಮನ್ನಣೆ ದೊರಕಲಿ ಎಂದು ಶುಭ ಹಾರೈಸಿದರು.

ನಂತರ ಮಾತನಾಡಿದ ಲೇಖಕ ಬಾಳೆಯಡ ಕಿಶನ್ ಪೂವಯ್ಯ, ಸಮಾಜದಲ್ಲಿನ ಭ್ರಷ್ಟಾಚಾರ, ಆಡಳಿತಗಳ ನ್ಯೂನತೆ, ಪ್ರಕೃತಿ ನಾಶ, ಪ್ರವಾಸೋದ್ಯಮದ ಅನಾಹುತಗಳು, ಮೂಢನಂಬಿಕೆಗಳು ಸೇರಿದಂತೆ ವಿಭಿನ್ನ ವಿಚಾರಧಾರೆಗಳನ್ನು ಪುಸ್ತಕದ ರೂಪದಲ್ಲಿ ಹೊರ ತರಲಾಗಿದೆ ಎಂದರು.

ಜನರು ನನ್ನ ಬರವಣಿಗೆಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ಜೀವನದಲ್ಲಿ ಅಳವಡಿಕೊಂಡಿಲ್ಲ. ಪ್ರತಿಯೊಬ್ಬರು ಪುಸ್ತಕಗಳನ್ನು ಓದಬೇಕು ಮತ್ತು ಅದರಲ್ಲಿರುವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಸಿರ ಕೊಡಗನ್ನು ಕೊಡಗಾಗಿ ಉಳಿಸಿಕೊಳ್ಳಲು ಪಣತೊಡಬೇಕು ಎಂದು ಕರೆ ನೀಡಿದರು.

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಹಾಗೂ ಕಿಶನ್ ಪೂವಯ್ಯ ಅವರ ಪತ್ನಿ ಬಾಳೆಯಡ ಸವಿತಾ ಪೂವಯ್ಯ ಮಾತನಾಡಿ, ಪ್ರತಿಯೊಬ್ಬರು ಪುಸ್ತಕವನ್ನು ಓದುವ ಮೂಲಕ ಸಮಾಜಿಕ ಕಳಕಳಿ ತೋರಬೇಕು ಹಾಗೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯದ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ೨೦೧೩ರಲ್ಲಿ ಸಮಾನ ಮನಸ್ಕ ಯುವಕ, ಯುವತಿಯರು ಸೇರಿ ಕೊಡವ ಮಕ್ಕಡ ಕೂಟ ಎಂಬ ಸಂಘಟನೆಯನ್ನು ರಚಿಸಲಾಯಿತು. ನಂತರ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿಸಿಕೊಂಡು ಸಾಹತ್ಯ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಿಶನ್ ಪೂವಯ್ಯ ಅವರ ತಂದೆ ಬಾಳೆಯಡ ಚರ್ಮಣ್ಣ, ಶ್ರೀ ರಾಜರಾಜೇಶ್ವರಿ ದೇವಾಲಯ ಸಮಿತಿಯ ಟ್ರಸ್ಟಿ ದೇವರಾಜು (ಮಣಿ), ಪ್ರಮುಖರಾದ ಪಕ್ತಿ, ಸತೀಶ್, ಕಿರಣ್ ಕುಮಾರ್, ಪ್ರಧಾನ ಅರ್ಚಕ ಶ್ರೀನಿವಾಸ್ ಸ್ವಾಮಿ, ರಾಜರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ದಾಕ್ಷಾಯಿಣಿ ವಾಸುದೇವ್, ಭಕ್ತರಾದ ಸೂದನ ಹರೀಶ್, ಮೊಟ್ಟೇರ ಹೇಮಾವತಿ, ನೆರವಂಡ ಉಷಾ ಮತ್ತಿತರರು ಉಪಸ್ಥಿತರಿದ್ದರು.