ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಮುಖ್ಯಶಿಕ್ಷಕರಿಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ೇರಾವ್ ಹಾಕಿದರು. ಸೀತಾರಾಮ, ಪರಮೇಶ್ವರಪ್ಪ ಗೌಡ, ಮಣಿಕಂಠ, ನಾಗರಾಜ ಇತರರಿದ್ದರು.  
ಜಿಲ್ಲೆ

ಅಮಾನತುಗೊಂಡ ಶಿಕ್ಷಕ ನಮ್ಮ ಶಾಲೆಗೆ ಬೇಡ

Shivamogga - Desk - Vinayakumar D B

ರಿಪ್ಪನ್‌ಪೇಟೆ: ಕರ್ತವ್ಯಕ್ಕೆ ಸತತವಾಗಿ ಗೈರಾದ ಕಾರಣಕ್ಕೆ ಅಮಾನತುಗೊಂಡ ತಮ್ಮಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡ್ತಿ ಮುಖ್ಯಶಿಕ್ಷಕ ಗಂಗಾನಾಯ್ಕ ನಮ್ಮ ಶಾಲೆಗೆ ಬೇಡ ಎಂದು ಗವಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿ, ಮುಖ್ಯಶಿಕ್ಷಕರ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕರ ಆದೇಶದ ಮೇರೆಗೆ ಗುರುವಾರ ಬೆಳಗ್ಗೆ ಮುಖ್ಯಶಿಕ್ಷಕ ಗಂಗಾನಾಯ್ಕ ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ್ದರು. ವಿಷಯ ತಿಳಿದ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಮುಂಚಿತವಾಗಿಯೇ ಶಾಲೆಗೆ ಆಗಮಿಸಿ ನಿಯೋಜನೆಗೊಂಡ ಮುಖ್ಯಶಿಕ್ಷಕರು ನಮ್ಮಲ್ಲಿ ಕರ್ತವ್ಯ ನಿರ್ವಹಿಸುವುದು ಬೇಡ ಎಂದು ನಿರಾಕರಿಸಿ ೇರಾವ್ ಹಾಕಿದರು.
ಮಾಹಿತಿ ಅರಿತ ಬಿಇಒ ಕೃಷ್ಣಮೂರ್ತಿ ಶಾಲೆಗೆ ಆಗಮಿಸಿ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಹೆಚ್ಚುವರಿಯಾಗಿ ಇನ್ನೊಬ್ಬ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು. ಮುಖ್ಯಶಿಕ್ಷಕರು ಹಿಂದಿ ಭಾಷೆಯಲ್ಲಿ ಪ್ರವೀಣ್ಯತೆ ಪಡೆದಿದ್ದು,ಹಿಂದಿ ಶಿಕ್ಷಕರ ಕೊರತೆಯನ್ನು ನೀಗಿಸುತ್ತಾರೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಇಲಾಖೆ ಕ್ರಮವಹಿಸುತ್ತದೆ. ವಿರೋಧಿಸದೆ ಒಮ್ಮತದಿಂದ ಸ್ವೀಕರಿಸಿ, ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.
ಇದಕ್ಕೊಪ್ಪದ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರದ ಅಗತ್ಯ ಇರುವುದರಿಂದ ಕ್ರಿಯಾಶೀಲ ಶಿಕ್ಷಕರನ್ನು ನಿಯೋಜಿಸಬೇಕು. ಗಂಗಾನಾಯ್ಕ ಅವರನ್ನು ನಮ್ಮ ಶಾಲೆಗೆ ನಿಯೋಜನೆ ಮಾಡಬಾರದು. ಹೊಸಬರು ನಿಯೋಜನೆಗೊಳ್ಳುವವರೆಗೆ ಪ್ರಭಾರ ಮುಖ್ಯಶಿಕ್ಷಕರನ್ನೇ ಮುಂದುವರಿಸಬೇಕೆಂದು ಆಗ್ರಹಿಸಿ ಬಿಇಒಗೆ ಮನವಿ ಸಲ್ಲಿಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಕ್ರಮಕೈಗೊಳ್ಳುವುದಾಗಿ ಬಿಇಒ ಭರವಸೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ, ಪರಮೇಶ್ವರಪ್ಪ ಗೌಡ, ಮಣಿಕಂಠ, ನಾಗರಾಜ, ಮಧುರಾಣಿ, ಜಗದಾಂಬಿಕಾ, ಗಿರಿರಾಜ್, ಪ್ರದೀಪ್, ಸತ್ಯದೇವಿ, ವಿನೋದಾ, ಗಂಗಮ್ಮ, ಲಕ್ಷ್ಮಣಪ್ಪ, ಗ್ರಾಪಂ ಸದಸ್ಯರಾದ ಗಣಪತಿ, ಮಂಜುಳಾ, ಜಿ.ಡಿ.ಮಲ್ಲಿಕಾರ್ಜುನ ಇತರರಿದ್ದರು.