ಎಚ್.ಡಿ.ಕೋಟೆ: ನಮ್ಮ ಭೂಮಿಗೆ ನಮ್ಮ ಪ್ರವೇಶ ಎಂಬ ಕಾರ್ಯಕ್ರಮವನ್ನು ಆ.9ರಂದು ಯಶವಂತಪುರ ಹಾಡಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ತಿಳಿಸಿದರು.
ಸರಗೂರು ತಾಲೂಕಿನ ಲಕ್ಷ್ಮಣಾಪುರ ಗ್ರಾಮದ ಸರ್ವೇ ನಂ.30, 32 ಹಾಗೂ ಆಳಲಹಳ್ಳಿ ಗ್ರಾಮದ ಸರ್ವೇ ನಂ.10 ರ ಜಮೀನನ್ನು ಬಂಡಿಪುರದ ಅರಣ್ಯ ಇಲಾಖೆಯವರು ಒತ್ತುವರಿ ಮಾಡಿಕೊಂಡಿದ್ದು, 152 ಕುಟುಂಬದವರು ಬೀದಿ ಪಾಲಾಗಿದ್ದಾರೆ. ಯರವ, ಜೇನುಕುರುಬ, ಸೋಲಿಗ ಸಮುದಾಯಕ್ಕೆ ಸೇರಿದ 152 ಕುಟುಂಬಗಳನ್ನು 1972ರ ವನ್ಯಜೀವಿ ಕಾಯ್ದೆ ಹಾಗೂ ನುಗು ಜಲಾಶಯ ನಿರ್ಮಾಣದಿಂದ ಕಾಡಿನಿಂದ ಹೊರಹಾಕಲ್ಪಟ್ಟಿದ್ಜಾರೆ. 2016-17ನೇ ಸಾಲಿನಲ್ಲಿ ಕಲ್ಲಂಗಡಿ, ಹಣ್ಣು ಬೆಳೆ ಬೆಳೆದಿದ್ದು, ರಾಸಾಯನಿಕ ಸಿಂಪಡಿಸುತ್ತೀರಾ ಎಂದು ಬೇಸಾಯದ ಭೂಮಿಯನ್ನು ಅರಣ್ಯ ಇಲಾಖೆಯು ಒತ್ತುವರಿ ಮಾಡಿಕೊಂಡಿದೆ. ನಮಗೆ ಯಾರಿಂದಲೂ ನ್ಯಾಯ ದೊರಕದ ಹಿನ್ನೆಲೆಯಲ್ಲಿ ವಿಶ್ವ ಆದಿವಾಸಿ ದಿನಾಚರಣೆಯಂದು ನಮ್ಮ ಮೂಲ ಸ್ಥಾನವನ್ನು ಪ್ರವೇಶ ಮಾಡುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದಿವಾಸಿ ಮುಖಂಡ ಮಾಲಿಂಗಯ್ಯ ಮಾತನಾಡಿ, ಪ್ರಭಾವಿ ವ್ಯಕ್ತಿಗಳು ಅರಣ್ಯದ ಜಮೀನುಗಳಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸುತ್ತಿದ್ದು, ಸರ್ಕಾರ ಅಂಥವರಿಗೆ ಅವಕಾಶ ಮಾಡಿಕೊಡುತ್ತದೆ. ಆದರೆ ನ್ಯಾಯಯುತವಾಗಿ ಆದಿವಾಸಿಗಳು ಬದುಕು ಕಟ್ಟಿಕೊಳ್ಳಲು ಜಮೀನುಗಳನ್ನು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಸದಸ್ಯರಾದ ಸಣ್ಣಯ್ಯ, ಇಂದ್ರಕುಮಾರ್, ಮಾದಮ್ಮ, ಚಿಕ್ಕರಾಜು, ನಾಗರಾಜು, ಮಹಾದೇವಸ್ವಾಮಿ, ಇಂದ್ರಕುಮಾರ್ ಇದ್ದರು.