ಮೈಸೂರು: ಎಲ್ಲ ರಾಜ್ಯಗಳಲ್ಲಿ ಸಭೆ ನಡೆಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡಾ.ಅರ್ಚನಾ ಮಜುಂದಾರ್ ತಿಳಿಸಿದರು.
ರಾಷ್ಟ್ರೀಯ ಮಹಿಳಾ ಆಯೋಗದಿಂದ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಮಹಿಳಾ ಆಯೋಗ ನಿಮ್ಮ ಮನೆ ಬಾಗಿಲಿಗೆ- ಮಹಿಳೆಯರ ಅಹವಾಲು ಆಲಿಸಲು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಮಹಿಳಾ ಆಯೋಗವು ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಧ್ವನಿಯಾಗಿ ನಿಲ್ಲುತ್ತದೆ. ಅಂತಹ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಮಹಿಳಾ ಆಯೋಗದ ಕರ್ತವ್ಯವಾಗಿದೆ ಎಂದು ಹೇಳಿದರು.
ದೇಶದಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಹಿಳಾ ಆಯೋಗದಿಂದ ವಿಚಾರಣೆಗೆ ಬಾಕಿ ಇದೆ. ಹಾಗಾಗಿ ಅವುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಎಲ್ಲ ರಾಜ್ಯಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ವಿಲೇವಾರಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಆಯೋಗದ ಮುಂದೆ ಬಾಕಿ ಇರುವ ಪ್ರಕರಣಗಳಲ್ಲಿ ಶೇ.50 ರಷ್ಟು ಕೌಟುಂಬಿಕ ದೌರ್ಜನ್ಯ ಪ್ರಕರಣಗಳಿವೆ. ವರದಕ್ಷಿಣೆ ಕಿರುಕುಳ, ಆತ್ಮಹತ್ಯೆ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಸಹ ಸೇರಿದೆ ಎಂದರು.
ಆಯೋಗಕ್ಕೆ ನೂತನ ಅಧ್ಯಕ್ಷ ಮತ್ತು ಸದಸ್ಯರು ನೇಮಕಗೊಂಡು ಆರು ತಿಂಗಳಾಗಿದೆ. ಹಾಗಾಗಿ ನೂತನ ತಂಡ ಮನೆ ಬಾಗಿಲಿಗೆ ಹೋಗಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯಗಳಲ್ಲಿಯೇ ಸಭೆ ನಡೆಸುವ ಮೂಲಕ ತ್ವರಿತವಾಗಿ ಪ್ರಕರಣಗಳ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಆದಷ್ಟು ಆಪ್ತ ಸಮಾಲೋಚನೆ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಆದ್ಯತೆ ನೀಡಲಾಗುವುದು. ದೂರು ಪ್ರಕರಣಗಳಲ್ಲಿ ಸಂತ್ರಸ್ತರಾಗುವ ಮಹಿಳೆಯರು ಮತ್ತು ಮಕ್ಕಳಿಗೆ ಆರ್ಥಿಕ ನೆರವಿನೊಂದಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಆಯೋಗ ಕ್ರಮ ವಹಿಸಲಿದೆ ಎಂದರು.
ಜತೆಗೆ ಅಗತ್ಯ ಇರುವವರಿಗೆ ಉಚಿತ ಕಾನೂನು ನೆರವು ಸಹ ನೀಡಲಾಗುವುದು. ಆಯೋಗವು ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಧ್ವನಿಯಾಗಿ ನಿಲ್ಲುತ್ತದೆ. ಅಂತಹ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಆಯೋಗದ ಕರ್ತವ್ಯವಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣ:
ಕರ್ನಾಟಕದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲಿ ಬಾಕಿ ಇದೆ. ಬೆಂಗಳೂರಿನಲ್ಲಿ 256 ಪ್ರಕರಣಗಳು ಇದ್ದರೆ ಮೈಸೂರು ವಿಭಾಗದಲ್ಲಿ 66 ಪ್ರಕರಣಗಳಿವೆ. ಇಲ್ಲಿನ ಸಭೆ ಬಳಿಕ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಹವಾಲು ಸ್ವೀಕಾರ ಸಭೆ ನಡೆಸಲಾಗುವುದು. ಬಳಿಕ ಬೆಳಗಾಂ ವಿಭಾಗದಲ್ಲಿಯೂ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾದ ಎಚ್.ಜೆ.ಗೀತಾ, ಎನ್. ಶೀಲಾ, ಗಾಯತ್ರಿ, ರೂಪಾಲಿ ಇತರರು ಇದ್ದರು.