ಮಡಿಕೇರಿ: ಜನಾಂಗದ ಮೂಲವನ್ನು ಅರಿತಾಗ ಮಾತ್ರ ನಮ್ಮ ಸಂಸ್ಕೃತಿ, ಭಾಷೆ, ಆಚಾರ, ವಿಚಾರ ಪದ್ಧತಿ ಉಳಿಯುತ್ತದೆ ಎಂದು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹೇಳಿದರು.
ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ ಕಥೆ-ನಿರ್ದೇಶನದ ಕೊಡವ ಚಲನಚಿತ್ರ ಬೇರ್ ಚಿತ್ರದ ಮುಹೂರ್ತ ಮೊಣ್ಣಂಡ ಶೋಭಾ ಸುಬ್ಬಯ್ಯರವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ ಮೊಣ್ಣಂಡ ಶೋಭಾ ಸುಬ್ಬಯ್ಯ, ಕೊಡವರು ತಮ್ಮ ಸಂಸ್ಕೃತಿಯನ್ನು ಯಾವುದಾದರೊಂದು ರೂಪದಲ್ಲಿ ಉಳಿಸಿ ಬೆಳೆಸುವ ಪ್ರಯತ್ನ ಮಾಡಿ ಮತ್ತೊಬ್ಬರಿಗೆ ಪ್ರೇರಣೆ ನೀಡಬೇಕು. ಕೊಡವ ಭಾಷೆಯಲ್ಲಿ ಪ್ರಸ್ತುತ ಹಲವು ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಕೊಡವ ಭಾಷೆಯ ಚಲನಚಿತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಲ್ಲದೆ ಕೊಡವ ಸಿನಿಮಾಗಳು ಬಂದ ನಂತರ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿತ್ರದ ಕಥೆ-ನಿರ್ದೇಶಕರಾದ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಕೊಡವ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವರ್ಷಕ್ಕೊಂದು ಕೊಡವ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಚಿತ್ರತಂಡಕ್ಕೆ ಕೊಡವಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸಿನಿಮಾ ನಿರ್ಮಿಸುವುದಾಗಿ ತಿಳಿಸಿದರು.
ಮಡಿಕೇರಿ ಸುತ್ತ ಮುತ್ತ ಸೇರಿದಂತೆ ಕೊಡಗಿನ ವಿವಿಧೆಡೆ ಚಿತ್ರೀಕರಣ ನಡೆಯಲಿದ್ದು, ಚಿತ್ರದ ಪೋಸ್ಟರ್‌ನಲ್ಲಿ ಮೊದಲ ಬಾರಿಗೆ ಕೊಡವ ಲಿಪಿಯನ್ನು ಬಳಕೆ ಮಾಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಪೊಮ್ಮಾಲೆ ಕೊಡಗ್, ಕಂದೀಲು ಸೇರಿದಂತೆ ಅನೇಕ ಕನ್ನಡ, ಕೊಡವ ಚಿತ್ರದ ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿರುವ ಕೊಟ್ಟುಕತ್ತೀರಾ ಯಶೋಧ ಪ್ರಕಾಶ್‌ರವರು ಕ್ಯಾಮರಕ್ಕೆ ಪೂಜೆ ಸಲ್ಲಿಸಿ, ಚಿತ್ರದ ಯಶಸ್ಸಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಟ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಮಂಡಿರ ಬೋಪಯ್ಯ ಹಾಜರಿದ್ದರು.