ಕೊಪ್ಪ: ನಮ್ಮ ದೇಶದ ಮೇಲೆ ವಿದೇಶಿಗರ ದಾಳಿ ನಡೆದರೂ ನಾವು ಸಂಸ್ಕೃತಿ, ಆಚಾರ ವಿಚಾರಕ್ಕೆ ಪರಕೀಯರಿಗೆ ಎಂದಿಗೂ ದಾಸರಾಗಲಿಲ್ಲ. ಇಂದಿಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರವನ್ನು ಪರಕೀಯರು ಹೃದಯ ಪೂರ್ವಕವಾಗಿ ಅಪ್ಪಿಕೊಂಡು ಒಪ್ಪಿಕೊಂಡು ಬಂದಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಹರಿಹರಪುರ ಸಮೀಪದ ಚಿತ್ರಕೂಟ ಪ್ರಬೋಧಿನಿ ಗುರುಕುಲದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಛಾತ್ರ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದ ಅವರು, ಹಿತ್ತಲಗಿಡ ಮದ್ದಲ್ಲ ಎಂಬಂತೆ ನಮ್ಮದನ್ನು ನಾವು ಕಡೆಗಣಿಸುತ್ತಿದ್ದೇವೆ. ಇಂದು ಮಕ್ಕಳಿಗೆ ಮನೆ ಜವಾಬ್ದಾರಿ, ಕುಟುಂಬದ ಜವಾಬ್ದಾರಿ, ಕೊನೆಗೆ ತಮ್ಮ ಜವಾಬ್ದಾರಿಯನ್ನೂ ಕೊಡದೇ ಅವರನ್ನು ಪಾಲಕರು ಓದಿಗೆ ಸೀಮಿತಗೊಳಿಸಿ ವಿದೇಶಕ್ಕೆ ದುಡಿಯಲು ಕಳುಹಿಸುತ್ತಿದ್ದಾರೆ ಎಂದರು.
ನಮಗೆ ಹಿರಿಯರು ಕೊಟ್ಟ ದೊಡ್ಡ ಸಂಪತ್ತು ಆಧ್ಯಾತ್ಮ, ಸಂಸ್ಕೃತಿ. ಅದನ್ನು ಉಳಿಸಿ, ಬೆಳೆಸಿ ನಮ್ಮ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ದೊಡ್ಡ ಹೊಣೆ ನಮ್ಮ ಮೇಲಿದೆ. ಮಾತೃ ದೇವೋ ಭವ, ಪಿತೃದೇವೋ ಭವ ಆಚಾರ್ಯ ದೇವೋ ಭವ ಇದು ನಮ್ಮ ಸಂಸ್ಕೃತಿ. ಇದರ ಜತೆಗೆ ರಾಷ್ಟ್ರ ದೇವೋ ಭವ ಎಂಬುದನ್ನೂ ಸೇರಿಸಿಕೊಳ್ಳಬೇಕು.ದೇಶಭಿಮಾನ, ನಮ್ಮ ಸಂಸ್ಕೃತಿ ಉಳಿಯಬೇಕು, ಬೆಳೆಯಬೇಕು ಎಂದರೆ ಗುರುಕುಲದಲ್ಲಿ ಮಕ್ಕಳು ಕಲಿತು ಮುಂದೆ ಬರಬೇಕು ಎಂದು ತಿಳಿಸಿದರು.
ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯಕಾರಿಣಿ ಸದಸ್ಯ ವಿ.ನಾಗರಾಜ್ ಮಾತನಾಡಿ, ಶಿಕ್ಷಣವೆಂಬುದು ಆಧ್ಯಾತ್ಮ ತಳಹದಿಯಲ್ಲಿರಬೇಕು. ಸಾಮಾಜಿಕ ದೃಷ್ಠಿ ಹಾಗೂ ರಾಷ್ಟ್ರೀಯತೆಯೊಂದಿಗೆ ನೀಡಲಾಗುವ ಶಿಕ್ಷಣದಿಂದ ಜಗತ್ತಿಗೆ ಒಳಿತಾಗುತ್ತದೆ. ಆಧ್ಯಾತ್ಮಿಕ ಜಾಗೃತ ಭಾರತ, ಸಾಮಾಜಿಕ ಭದ್ರ ಭಾರತ, ಜ್ಞಾನ ವಿಜ್ಞಾನಗಳ ಆಗರ ಭಾರತ, ಆರ್ಥಿಕವಾಗಿ ಬಲಿಷ್ಠ ಭಾರತದ ನಿರ್ಮಾಣ ಸ್ವಾಮಿ ವಿವೇಕಾನಂದರ ಕನಸಾಗಿತ್ತು. ಇದನ್ನು ನನಸಾಗಿಸಲು ಅಗತ್ಯವಾದ ಶಿಕ್ಷಣ ಭಾರದಲ್ಲಿರಬೇಕು ಎಂಬುದು ಜಾಗತಿಕ ಸತ್ಯ ಎಂದರು.
ಕಾಫಿ ಬೆಳೆಗಾರರಾದ ಶಿರೀಶ್ ಪಿ.ಗುರ್ಜರ್ ಮಾತನಾಡಿ, ಮಕ್ಕಳ ಸರ್ವತೋಮುಖ ವಿಕಾಸವಾಗಬೇಕೆಂಬ ಮಹದಾಸೆಯಿಂದ ಗುರುಕುಲ ಆರಂಭವಾಯಿತು. ಶಿಕ್ಷಣ ಎಂದರೆ ಸಂಸ್ಕಾರ ಮತ್ತು ಸಂಸ್ಕೃತ. ಸಂಸ್ಕೃತ ಮಹತ್ವವನ್ನು ಜಗತ್ತು ಅರಿತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಯೂ ಸಂಸ್ಕೃತವನ್ನು ಸ್ವೀಕರಿಸಿದೆ. ಪುರಾತನ ಕಾಲದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಭಾವನೆಯಾಗಿತ್ತು ಎಂದು ತಿಳಿಸಿದರು.
ಪ್ರಬೋಧಿನಿ ಟ್ರಸ್ಟ್‌ನ ನಿರ್ವಾಹಕ ವಿಶ್ವಸ್ಥ ರಾದ ಎಚ್.ಬಿ.ರಾಜಗೋಪಾಲ್, ಪ್ರಬೋಧಿನಿ ಟ್ರಸ್ಟ್‌ನ ವಿಶ್ವಸ್ಥರಾದ ವಿಜಯಕುಮಾರ್, ಸುಮಂತ ಶೆಟ್ಟಿ , ನಾರಾಯಣ ಶೇವಿರೆ, ಡಾ.ಮಹಾಬಲೇಶ್ವರ ಭಟ್, ಭೀಮಣ್ಣ, ವಿಶ್ವಜಿತ್, ಅರವಿಂದ, ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ್ ಕೃಷ್ಣಪ್ರಾಸಾದ, ಹಾಸನ ವಿಭಾಗ ಪ್ರಚಾರಕ್ ಮಂಜುನಾಥ ಇದ್ದರು.