ಬ್ಯಾಡಗಿ: ಪಟ್ಟಣದ ಬಡವರಿಗೆ ಅನುಕೂಲವಾಗಲೆಂದು ಆರಂಭಿಸಿದ ನಮ್ಮ ಕ್ಲಿನಿಕ್ ಗೆ ತಾಂತ್ರಿಕ ಸಿಬ್ಬಂದಿ, ಸಲಕರಣೆಗಳ ಕೊರತೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಕಳೆದ ಮೂರು ತಿಂಗಳ ಹಿಂದೆ ಸರ್ಕಾರದ ಆದೇಶದಂತೆ ಇಲ್ಲಿನ ಇಸ್ಲಾಂಪುರ ಓಣಿಯಲ್ಲಿ ನಮ್ಮ ಕ್ಲಿನಿಕ್ ಆರಂಭಗೊಂಡಿದೆ. ಆದರೆ, ಇದಕ್ಕೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಮನೆಯಲ್ಲಿ ಆಸ್ಪತ್ರೆ ತೆರೆಯಲಾಗಿದೆ.
ಕ್ಲಿನಿಕ್ ಗೆ ವೈದ್ಯ 1, ಸ್ಟಾಪ್ ನರ್ಸ್ 1, ಲ್ಯಾಬ್ ಟೆಕ್ನಿಷಿಯನ್ 1, ಗ್ರುಪ್ ಡಿ 1 ಹುದ್ದೆ ಮಂಜೂರಾಗಿದೆ. ಪ್ರತಿದಿನ 25-30 ಹೊರರೋಗಿಗಳು ಬಂದು ಹೋಗುತ್ತಿದ್ದು, ಲ್ಯಾಬ್ ಟೆಕ್ನಿಷಿಯನ್ ಹೊರತುಪಡಿಸಿ ಉಳಿದಂತೆ ಕಾಯಂ ವೈದ್ಯ ಸಿಬ್ಬಂದಿಗಳಿದ್ದಾರೆ.
ಆದರೆ, ಮುಖ್ಯವಾಗಿ ಬಹುತೇಕ ರೋಗ ಕಂಡುಹಿಡಿಯಲು ಅಗತ್ಯವಾದ ರಕ್ತ ತಪಾಸಣೆ ಲ್ಯಾಬ್‌ಗೆ ಸಿಬ್ಬಂದಿ, ತಾಂತ್ರಿಕ ಸಾಮಗ್ರಿ ಒದಗಿಸಿಲ್ಲ.
ಇದರಿಂದ ಸಕ್ಕರೆ ಕಾಯಿಲೆ, ನಿರಂತರ ಜ್ವರ ಸೇರಿದಂತೆ ಹಲವು ತೊಂದರೆಯಿಂದ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬಡವರಿಗಾಗಿ ನಿರ್ಮಿಸಿದ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಕಲ್ಪಿಸದಿದ್ದರೆ ಏನು ಪ್ರಯೋಜನ ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
24X7 ಕೇಂದ್ರಕ್ಕೆ ಆಗ್ರಹ: ಇಲ್ಲಿನ ಆಸ್ಪತ್ರೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ಮಾತ್ರ ತೆರೆದಿರುತ್ತಿದೆ. ರಾತ್ರಿ ಹೊತ್ತಲ್ಲಿ ಯಾವೊಬ್ಬ ವೈದ್ಯ ಸಿಬ್ಬಂದಿ ಇರುವುದಿಲ್ಲ. ಆದರೆ, ಸಾರ್ವಜನಿಕರು ಹಗಲು ಹೊತ್ತಿನಲ್ಲಿ ಎಲ್ಲಿಗಾದರೂ ತೆರಳಿ ಚಿಕಿತ್ಸೆ ಪಡೆಯುತ್ತಾರೆ.
ರಾತ್ರಿ ಹೊತ್ತಲ್ಲಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೆ ಆರೋಗ್ಯ ತೊಂದರೆ ಉಂಟಾದಾಗ ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಆದ್ದರಿಂದ ದಿನದ 24 ಗಂಟೆಯೂ ಕ್ಲಿನಿಕ್ ತೆರೆದು ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂಬುದು ಸ್ಥಳೀಯರ ಕೂಗಾಗಿದೆ.
ಅನುದಾನ ಲಭ್ಯವಿಲ್ಲ: ಆಸ್ಪತ್ರೆ 3 ತಿಂಗಳಿಂದ ಕಾರ್ಯಾರಂಭ ಮಾಡಿದ್ದು, ಈವರೆಗೂ ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯಗಳ ನಿರ್ವಹಣೆಗೆ ನಿರ್ವಹಣೆ ಪ್ರತ್ಯೇಕ ವೆಚ್ಚ ಲಭ್ಯವಿಲ್ಲವಾಗಿದೆ.
ವೈದ್ಯ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದಾರೆ. ಇವರಿಗೆ 2 ತಿಂಗಳಿಂದ ಸಮರ್ಪಕವಾಗಿ ವೇತನ ಲಭ್ಯವಾಗಿಲ್ಲ.
ಅಲ್ಲದೆ ಇಲ್ಲಿನ ಸಿಬ್ಬಂದಿಗೆ ತರಬೇತಿ, ಆಸ್ಪತ್ರೆ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕಿದೆ. ಸ್ವಂತ ಕಟ್ಟಡ ನಿರ್ಮಾಣ ಸೇರಿದಂತೆ ಹೆಚ್ಚಿನ ಅನುದಾನ ನೀಡುವ ಮೂಲಕ ಆಸ್ಪತ್ರೆಯನ್ನು ಇನ್ನಷ್ಟು ಉತ್ತಮ ದರ್ಜೆಗೆ ಏರಿಸಬೇಕಿದೆ.
ನಮ್ಮ ಕ್ಲಿನಿಕ್ ಇಸ್ಲಾಂಪುರ ಓಣಿಯಲ್ಲಿ ಆರಂಭವಾಗಿರುವುದು ಸಂತಸ ತಂದಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಅನುಕೂಲವಾಗಿದೆ. ಈ ಕ್ಲಿನಿಕ್ ರಾತ್ರಿ ಹೊತ್ತಲ್ಲಿ ತೆರೆಯುವಂತಾಗಬೇಕು. ಪ್ರತ್ಯೇಕ ಮಹಿಳಾ ವೈದ್ಯರು, ರಕ್ತ ತಪಾಸಣೆ ಸಿಬ್ಬಂದಿ ಸೇರಿದಂತೆ ಇನ್ನಷ್ಟು ಸೌಲಭ್ಯ ಕಲ್ಪಿಸುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಬೇಕು. ರೋಗಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು.ಶಭೀನಾಭಾನು ಎಂ.ಎಸ್. ಸ್ಥಳೀಯರು
ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಸಮಸ್ಯೆ ಇಲ್ಲ. ಲ್ಯಾಬ್ ಟೆಕ್ನಿಷಿಯನ್ ನೇಮಿಸಿಕೊಂಡಿದ್ದು, ಚುನಾವಣೆ ನೀತಿ ಸಂಹಿತೆಯಿರುವ ಕಾರಣದಿಂದ ಆದೇಶ ಪತ್ರ ನೀಡಿಲ್ಲ. ಇನ್ನುಳಿದಂತೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಔಷಧ ಸೇರಿದಂತೆ ಲಸಿಕೆ ನೀಡುತ್ತಿದ್ದೇವೆ. ಸ್ವಚ್ಛತೆ ಹಾಗೂ ಇತರೆ ವೆಚ್ಚಗಳನ್ನು ಮಂಜೂರಾಗಬೇಕಿದೆ. ಈಗ ತಾಲೂಕಾಸ್ಪತ್ರೆಯಲ್ಲಿರುವ ಕೆಲ ಚಿಕಿತ್ಸೆಗಳು ಇಲ್ಲಿಯೂ ನೀಡಲಾಗುತ್ತಿದೆ.ಡಾ. ಅರಾಫತ್ ಕಾಗದಗಾರತಾಲೂಕು ವೈದ್ಯಾಧಿಕಾರಿ