ಮುದ್ದೇಬಿಹಾಳ: ತಾಲೂಕಿನ ಎಲ್ಲ 9 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ನಡೆದ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ನೇರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟಲು ಇದೇ ಮೊದಲ ಬಾರಿ ಎಲ್ಲ ಪರೀಕ್ಷಾರ್ಥಿಗಳನ್ನು ಓಟೋಸ್ಕೋಪ್ ಯಂತ್ರದಿಂದ ಕಿವಿಯಲ್ಲಿ ಬೆಳಕು ಹರಿಸಿ ಕಿವಿಯ ಆಳದಲ್ಲಿ ಇರಬಹುದಾದ ವಿದ್ಯುನ್ಮಾನ ಯಂತ್ರಗಳಾದ ಅತ್ಯಾಧುನಿಕ ಬ್ಲೂಟೂತ್, ಇಯರ್‌ೋನ್, ಇಯರ್‌ಬಡ್ಸ್ ಇನ್ನಿತರ ಶ್ರವಣ ಸಾಧನಗಳ ವಿನೂತನ ಮಾದರಿಯ ತಪಾಸಣೆ ನಡೆಸಲಾಯಿತು.
ಇದಕ್ಕಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಜ್ಞ ವೈದ್ಯರು ಮತ್ತು ಶ್ರವಣತಜ್ಞ ನುರಿತ ಸಿಬ್ಬಂದಿ ನಿಯೋಜಿಸಿದ್ದರು. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷಾರ್ಥಿಗಳನ್ನು ಇದಕ್ಕಾಗಿ ನೇಮಿಸಿದ ಆರೋಗ್ಯ ಸಿಬ್ಬಂದಿ ಎರಡೂ ಕಿವಿ ತಪಾಸಣೆ ಕಡ್ಡಾಯಗೊಳಿಸಿದ್ದರು.
ಮುದ್ದೇಬಿಹಾಳ ಪಟ್ಟಣದಲ್ಲಿ ಅಭ್ಯುದಯ, ಶಾ ಎಸ್.ಪಿ.ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ, ಎಂಜಿವಿಸಿ, ಎಂಜಿಎಂಕೆ, ಜ್ಞಾನಭಾರತಿ, ಸರ್ಕಾರಿ ಪದವಿಪೂರ್ವ, ಎಸ್.ಎಸ್.ಶಿವಾಚಾರ್ಯ, ಬಿದರಕುಂದಿ ಹತ್ತಿರದ ಆಕ್ಸ್‌ರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ, ನಾಗರಬೆಟ್ಟದ ಎಕ್ಸ್‌ಪರ್ಟ್ ಪಿಯು ಸೈನ್ಸ್ ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿದ್ದವು.
ತಾಲೂಕಿನ ಎಲ್ಲ 9 ಕೇಂದ್ರಗಳಿಗೆ 3778 ಪರೀಕ್ಷಾರ್ಥಿಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಪೈಕಿ 256 ಪರೀಕ್ಷಾರ್ಥಿಗಳು ಗೈರಾಗಿ 3532 ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಸರ್ಕಾರಿ ಪಿಯು ಕಾಲೇಜು ಕೇಂದ್ರದ ಮುಖ್ಯಸ್ಥ, ಪ್ರಾಚಾರ್ಯ ಎಸ್.ಎಸ್.ಅಂಗಡಿ ತಿಳಿಸಿದರು.
ಪ್ರತಿ ಕೇಂದ್ರಕ್ಕೆ ಪರೀಕ್ಷಾ ಉಸ್ತುವಾರಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಶ್ರವಣ ತಪಾಸಣೆ ತಂಡದ ಡಾ.ಶಿವಶಂಕರ ಅಜೂರ, ಡಾ.ಶರಣಬಸು ಅಂದೇಲಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಇನ್ನಿತರ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.