ಮಂಗಳೂರು: ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರಕ್ಕೆ ಬುಧವಾರ ನಗರದ ಮಿಲಾಗ್ರಿಸ್ ಚರ್ಚ್‌ನಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್.ಕೆ.ಪಾಟೀಲ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೈನ್, ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್, ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಜೆ.ಆರ್.ಲೋಬೊ, ಮೊಯ್ದೀನ್ ಬಾವ, ಎಂ.ಎ.ಗಫೂರ್, ಕಳ್ಳಿಗೆ ತಾರಾನಾಥ ಶೆಟ್ಟಿ ಸಹಿತ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಕ್ರೈಸ್ತ ಧರ್ಮಪ್ರಾಂತ್ಯದ ಹಲವು ಧರ್ಮಗುರುಗಳೂ ಅಂತಿಮ ದರ್ಶನ ಪಡೆದರು. ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಬಲಿಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿದರು.
ಕಣ್ಣೀರಿಟ್ಟ ಜನಾರ್ದನ ಪೂಜಾರಿ: ರಾಜಕೀಯ ಜೀವನದ ಜತೆಗಾರ ಆಸ್ಕರ್ ಫರ್ನಾಂಡಿಸ್ ಅವರಿಗೆ ಜನಾರ್ದನ ಪೂಜಾರಿ ಅಂತಿಮ ನಮನ ಸಲ್ಲಿಸುವ ವೇಳೆ ಭಾವುಕರಾದರು. ಬಳಿಕ ಬ್ಲೋಸಂ ಫರ್ನಾಂಡಿಸ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಚರ್ಚ್‌ನಿಂದ ಹೊರ ಬಂದು ಮಾಧ್ಯಮದವರ ಜತೆ ಮಾತನಾಡುವ ವೇಳೆ ಕಣ್ಣೀರಿಟ್ಟರು. ಸಜ್ಜನ ರಾಜಕಾರಣಿಯಾಗಿದ್ದ ಆಸ್ಕರ್ ಮತ್ತು ನಾನು ಜತೆಯಾಗಿಯೇ ಕೆಲಸ ಮಾಡಿದವರು. ಮೃದು ಸ್ವಭಾವ ಹೊಂದಿದ್ದ ಅವರು ಅಜಾತಶತ್ರುವಾಗಿದ್ದರು ಎಂದು ಹೇಳಿದರು.
ಇಂದು ಅಂತ್ಯಸಂಸ್ಕಾರ: ಆಸ್ಕರ್ ಪಾರ್ಥಿವ ಶರೀರವನ್ನು ಬುಧವಾರ ಸಾಯಂಕಾಲ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ರಾಹುಲ್ ಗಾಂಧಿ ಸಹಿತ ಪಕ್ಷದ ರಾಷ್ಟ್ರೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.