ಜಿಲ್ಲೆ

ಆದಾಯಕ್ಕೆ ಅಲಂಕಾರಿಕ ಸೂರ್ಯಕಾಂತಿ ಬೆಸ್ಟ್: ವರ್ಷವಿಡೀ ಬೆಳೆಯಬಹುದಾದ ಅಪರೂಪದ ತಳಿ

ಬೆಂಗಳೂರು: ಅಡುಗೆ ಎಣ್ಣೆಗೆ ಬಳಸುತ್ತಿದ್ದ ಸೂರ್ಯಕಾಂತಿ ಈಗ ಅಲಂಕಾರಿಕ ಹೂ ರೂಪದಲ್ಲಿ ಗಮನ ಸೆಳೆಯುತ್ತಿದೆ. ಹೌದು, ಮದುವೆ ಸೇರಿದಂತೆ ಇತರ ಶುಭ ಕಾರ್ಯಗಳಲ್ಲಿ ಈಗ ಅಲಂಕಾರಿಕ ಸೂರ್ಯಕಾಂತಿ ಪುಷ್ಪ ಜೋಡಣೆ ಕಲೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ್ಲವರ್ ಡೆಕೊರೇಷನ್‌ನಲ್ಲಿ ವಿಶೇಷ ಸ್ಥಾನ ಪಡೆದಿರುವ ಈ ‘ಹಳದಿ ರಾಣಿ ಹೂ’ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ತನ್ನ ಆಕರ್ಷಣೀಯ ರೂಪು, ಬೆಡಗಿನಿಂದ ಕಂಗೊಳಿಸುವ ಈ ಚೆಲುವಿನ ಹೂವು ಈಗ ಬೆಳೆಗಾರರ ಅಚ್ಚುಮೆಚ್ಚಿನ ಪುಷ್ಪವಾಗಿದೆ. ಕೆಲ ಹೂವುಗಳಿಗೆ ದುಬಾರಿ ಹಣ ತೆರುವ ಬದಲು ಕೈಗೆಟಕುವ ದರದಲ್ಲಿ ಲಭ್ಯವಾಗುವ ಅಲಂಕಾರಿಕ ಸೂರ್ಯಕಾಂತಿಯತ್ತ ದೃಷ್ಟಿ ನೆಟ್ಟಿದೆ. ಮುಖ್ಯವಾಗಿ ವಾರ ಕಾಲ ಬಾಡದೆ ತನ್ನ ತಾಜಾತನ ಉಳಿಸಿಕೊಳ್ಳುವುದರಿಂದ ಎಲ್ಲ ಬಗೆಯ ಸಮಾರಂಭಗಳಿಗೂ ಬಳಸಬಹುದಾಗಿದೆ. ಗಣ್ಯ ವ್ಯಕ್ತಿಗಳಿಗೆ ನೀಡುವ ಬೊಕೆಗಳಲ್ಲೂ ಅಲಂಕಾರಿಕ ಸೂರ್ಯಕಾಂತಿಗೆ ಸ್ಥಾನ ದೊರೆತಿದೆ.

ಕಡಿಮೆ ಖರ್ಚು, ಆದಾಯ ಹೆಚ್ಚು:

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಈ ಅಲಂಕಾರಿಕ ಸೂರ್ಯಕಾಂತಿ ತಳಿ ಕೆಲ ವರ್ಷಗಳಿಂದ ಹಿಂದೆಯೇ ಬಿಡುಗಡೆ ಕಂಡಿದೆ. ಇದೀಗ ಪುಷ್ಪೋದ್ಯಮದಲ್ಲಿ ಹೊಸತನ ಮೂಡುತ್ತಿರುವ ಪರಿಣಾಮ ಬೇಡಿಕೆ ಹೆಚ್ಚುತ್ತಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಕಾರಣದಿಂದಾಗಿ ರೈತರಿಗೆ ಅಧಿಕ ಹಣ ಕೈಸೇರುವಂತಾಗಿದೆ.

ಸಾಮಾನ್ಯ ಸೂರ್ಯಕಾಂತಿ ತಳಿಯನ್ನು ಒಂದು ಎಕರೆಯಲ್ಲಿ ಬೆಳೆದರೆ ಅದರಿಂದ 10 ಕ್ವಿಂಟಾಲ್ ಬೀಜ ಸಿಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 6 ಸಾವಿರ ರೂ. ದರ ಇದ್ದು, ಎಕರೆಗೆ 60 ಸಾವಿರ ರೂ. ಸಿಗುತ್ತದೆ. ಆದರೆ, ಅಲಂಕಾರಿಕ ಸೂರ್ಯಕಾಂತಿ ಎಕರೆಗೆ 40 ಸಾವಿರ ಸಸಿ ನೆಟ್ಟಲ್ಲಿ ಒಂದು ಹೂವಿಗೆ 8-10 ರೂ.ನಂತೆ ಮಾರಾಟ ಮಾಡಿದರೆ 4-5 ಲಕ್ಷ ರೂ. ಲಭ್ಯವಾಗುತ್ತದೆ. ಬೇಸಾಯದ ಖರ್ಚು 25 ಸಾವಿರ ಕಳೆದರೂ, ಉಳಿದ ಹಣ ಪೂರ್ಣವಾಗಿ ರೈತರ ಕೈಸೇರುತ್ತದೆ. ಸಾಮಾನ್ಯ ತಳಿಗಿಂತ ಅಲಂಕಾರಿಕ ಸೂರ್ಯಕಾಂತಿ 10 ಪಟ್ಟು ಆದಾಯ ತಂದುಕೊಡಲಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

60 ದಿನಗಳಲ್ಲಿ ಕೈಸೇರುವ ಬೆಳೆ:

ಅಲಂಕಾರಿಕ ಸೂರ್ಯಕಾಂತಿ ತಳಿಯಲ್ಲಿ 50-60 ದಿನಗಳಲ್ಲಿ ಹೂಗಳು ಕೊಯ್ಲಿಗೆ ಬರುತ್ತದೆ. ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶ ಹೊರತುಪಡಿಸಿ ಎಲ್ಲ ಹವಾಗುಣದಲ್ಲೂ ಬೇಸಾಯ ಮಾಡಬಹುದು. ನೀರಾವರಿ ಸೌಲಭ್ಯ ಇದ್ದಲ್ಲಿ ವರ್ಷವಿಡೀ ಬೆಳೆ ಬೆಳೆಯಬಹುದು. ಮಾರುಕಟ್ಟೆಯಲ್ಲಿ ಬೇಡಿಕೆ ಆಧರಿಸಿ ಹೂಗಳನ್ನು ಸರಬರಾಜು ಮಾಡಿದರೆ ಅಧಿಕ ಆದಾಯ ಸಿಗಲಿದೆ.

ಸಾಮಾನ್ಯ ಸೂರ್ಯಕಾಂತಿಗಿಂತ ಅಲಂಕಾರಿಕ ಸೂರ್ಯಕಾಂತಿ ಬೆಳೆ ತುಸು ಭಿನ್ನವಾಗಿದೆ. ಕಡಿಮೆ ಅವಧಿಯಲ್ಲಿ ಇಳುವರಿ ಬರುವುದರಿಂದ ಆದಾಯಕ್ಕೆ ಖೋತಾ ಇರದು. ವೆಚ್ಚ ಕಡಿಮೆ ಆಗುವುದರಿಂದ ರೈತರಿಗೆ ಹೊರೆ ಎನಿಸದು. ಕೃಷಿ ವಿವಿಯಿಂದ ಈ ತಳಿಯ ಬೀಜಗಳನ್ನು ಉತ್ಪಾದಿಸಿ ವಿತರಿಸಲು ಈಗಷ್ಟೇ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷ ರೈತರಿಗೆ ಬೀಜ ಸಿಗಬಹುದು.

- ಡಾ. ಎಸ್.ಡಿ. ನೆಹರು, ಸಸ್ಯತಳಿಶಾಸ ತಜ್ಞ, ಬೆಂ. ಕೃಷಿ ವಿವಿ