ಅರಳಿಹಳ್ಳಿ ತಾಂಡಾದ ಆಶ್ರಯ ಮನೆಗಳ ನೋಟ. 
ಜಿಲ್ಲೆ

ಮೂಲ ಪಟ್ಟಾದಾರರಿಗೆ ಸಿಗದ ವಸತಿ ಸೌಲಭ್ಯ

ರುದ್ರಪ್ಪ ವಾಲಿ

ಕಂಪ್ಲಿ: ತಾಲೂಕಿನ ಅರಳಿಹಳ್ಳಿ ತಾಂಡಾದಲ್ಲಿ ನಿರ್ಮಿಸಿರುವ ಆಶ್ರಯ ಮನೆಗಳಲ್ಲಿ ಕಳೆದ ಮೂರು ದಶಕಗಳಿಂದ ಮೂಲ ಪಟ್ಟಾದಾರರೇ ಬೇರೆ, ವಾಸಿಸುವವರೇ ಬೇರೆ. ಮೂಲ ಪಟ್ಟಾದಾರರು ನಮಗೆ ಮಂಜೂರಾದ ಮನೆ ಬಿಡಿಸಿಕೊಡಿ ಎಂದರೆ, ವಾಸವಿರುವವರು ಮೂವತ್ತು ವರ್ಷದಿಂದ ಇಲ್ಲೇ ಇದ್ದೇವೆ. ಇದೇ ನಮ್ಮ ಮನೆ ಎನ್ನುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತಲೆನೋವಾಗಿದೆ.\

ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯ ಅರಳಿಹಳ್ಳಿ ತಾಂಡಾದ ಸರ್ವೇ ನಂ.77/ಎ ಒಟ್ಟು 69 ಎಕರೆ ಸರ್ಕಾರಿ ಭೂಮಿಯಲ್ಲಿ 17ಎಕರೆಯನ್ನು 1991-92ರಲ್ಲಿ ಆಶ್ರಯ ನಿವೇಶನಕ್ಕೆ ನೀಡಿದೆ. ಇದರಲ್ಲಿ 130 ನಿವೇಶನಗಳಲ್ಲಿ 105 ಮನೆ, 2000-2001ರಲ್ಲಿ 50 ಮನೆ, 2003-04ರಲ್ಲಿ 83 ಮನೆಗಳನ್ನು ನಿರ್ಮಿಸಲಾಗಿದೆ.

1992ರಲ್ಲಿ ತುಂಗಭದ್ರಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಅರಳಿಹಳ್ಳಿಯ ಈರಣ್ಣಕಟ್ಟೆ ಬಳಿ ವಾಸಿಸುತ್ತಿದ್ದ 130 ಕುಟುಂಬಗಳು ಈಗಾಗಲೇ ನಿರ್ಮಾಣಗೊಂಡಿದ್ದ 105ಮನೆಗಳಿಗೆ ಯಾರ‌್ಯಾರೋ ಹೊಕ್ಕು ಆಶ್ರಯ ಪಡೆದರು.

ಕ್ರಮೇಣ ಅವರು ವಾಸಿಸುತ್ತಿರುವ ಮನೆಗಳನ್ನೇ ದುರಸ್ತಿಗೊಳಿಸಿಕೊಳ್ಳುತ್ತ ಬಂದರು. 130ರ ಪೈಕಿ 19 ಮನೆಗಳಲ್ಲಿ ಮೂಲ ಪಟ್ಟಾದಾರರು ಇದ್ದು, ಉಳಿದ ಮನೆಗಳಲ್ಲಿ ಬೇರೆಯವರು ಆಶ್ರಯಪಡೆದಿದ್ದಾರೆ.

ಇದೀಗ ಮೂಲ ವಾರಸುದಾರರು ತಮ್ಮ ಮನೆಗಳನ್ನು ತಮಗೆ ಮರಳಿಸುವಂತೆ ಒತ್ತಾಯಿಸುತ್ತಿದ್ದು, ಬಹುವರ್ಷಗಳಿಂದ ವಾಸವಿರುವವರು ಬಿಡಲ್ಲ ಎನ್ನುತ್ತಿದ್ದಾರೆ. ಅಲ್ಲದೆ ನಮಗೇ ಪಟ್ಟಾ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚು ನಿವೇಶನಗಳಲ್ಲಿ ವಾಸವಿದ್ದು ಕುಟುಂಬಕ್ಕೊಂದು ನಿವೇಶನ ಕೊಡಿ ಎನ್ನುತ್ತಿದ್ದಾರೆ. ಇದರಿಂದ ಸಮಸ್ಯೆ ಬಿಗಡಾಯಿಸಿದೆ.

ಈಗ ವಾಸವಿರುವವರಿಗೆ ಅದೇ ಮನೆಯ ಪಟ್ಟಾ ಮಾಡಿಕೊಡಿ. ಒಂದು ಕುಟುಂಬಕ್ಕೆ ಒಂದು ಮನೆ ನೀಡಿ. ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು.ಆರ್.ಕೆ.ಗವಿಸಿದ್ದಪ್ಪಗ್ರಾಪಂ ಸದಸ್ಯ, ಅರಳಿಹಳ್ಳಿ ತಾಂಡಾ
ವಾಸವಿದ್ದವರಿಗೆ ಪಟ್ಟಾ ಕೊಡುವಲ್ಲಿ ಅಧಿಕಾರಿಗಳು ಮುಂದಾಗಬೇಕು. ಒಂದು ಕುಟುಂಬಕ್ಕೆ ಒಂದು ಮನೆ ಕೊಡಲು ಯಾರಿಗೂ ಅಡ್ಡಿಯಿಲ್ಲ.ಜ್ಯೋತಿ ಗುಂಡನಾಯ್ಕಗ್ರಾಪಂ ಮಾಜಿ ಅಧ್ಯಕ್ಷೆ, ಅರಳಿಹಳ್ಳಿ ತಾಂಡಾ
ಅರಳಿಹಳ್ಳಿ ತಾಂಡಾದಲ್ಲಿ ವಾಸವಿರುವ ಮನೆಗಳ ಸಮೀಕ್ಷೆ ಮಾಡಲಾಗಿದೆ. ಅಗತ್ಯ ದಾಖಲೆಗಳನ್ನು ಪಂಚಾಯಿತಿ ಕಚೇರಿಗೆ ಸಲ್ಲಿಸುವಂತೆ ವಾರಸುದಾರರಿಗೆ ಸೂಚಿಸಿರುವೆ. ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನ ನಡೆದಿದೆ.ಹಾಲಹರವಿ ಶೇಷಗಿರಿಪಿಡಿಒ, ಸಣಾಪುರ.
ಅರಳಿಹಳ್ಳಿ ತಾಂಡಾದ ಆಶ್ರಯ ಮನೆಗಳ ಸಮಸ್ಯೆ ಬಗೆಹರಿಸಲು ಒಂದೂವರೆ ವರ್ಷದಿಂದ ಪ್ರಯತ್ನಿಸಿದರೂ ನನ್ನಿಂದ ಸಾಧ್ಯವಾಗಿಲ್ಲ. ಅಲ್ಲಿನ ಜನರಲ್ಲಿ ಒಮ್ಮತ, ಪರಸ್ಪರ ಸಹಕಾರ ಇಲ್ಲ.ಜೆ.ಎನ್.ಗಣೇಶ್ಶಾಸಕ, ಕಂಪ್ಲಿ