ಕಂಪ್ಲಿ: ಲಿಂಗಪೂಜೆ ಕೇವಲ ಆಚರಣೆಯಲ್ಲ. ಅದರಲ್ಲಿ ಮನೋವೈಜ್ಞಾನಿಕತೆ ಅಡಗಿದೆ ಎಂದು ಎಮ್ಮಿಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಆದೀಶ್ ಜವಳಿ ಹೇಳಿದರು.
ಇಲ್ಲಿನ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಗುರುಮಠದಲ್ಲಿ ಲಿಂ.ಗೊಗ್ಗ ಮಹಾದೇವಮ್ಮ ಸ್ಮರಣಾರ್ಥ ಶುಕ್ರವಾರ ಹಮ್ಮಿಕೊಂಡಿದ್ದ 238ನೇ ಶಿವಾನುಭವ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕತೆ ಭರಾಟೆಯಲ್ಲಿ ಲಿಂಗಪೂಜೆ ಮೂಲಸ್ವರೂಪ ಕಳೆದುಕೊಂಡಿದೆ. ಮನಸು ನಿಯಂತ್ರಣ ಕಳೆದುಕೊಳ್ಳುತ್ತಿರುವುದರಿಂದ ಕೊಲೆ, ದೌರ್ಜನ್ಯ, ದುರ್ಘಟನೆಗಳು ನಡೆಯುತ್ತಿವೆ. ಹಿಂದುಧರ್ಮ ಪುನರುಜ್ಜೀವನಕ್ಕೆ ಶಂಕರರು ಸರಳವಾದ ಅಧ್ಯಾತ್ಮ ಮಾರ್ಗ ಬೋಧಿಸಿದರು ಎಂದರು.
ಇಟಗಿಯ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿ, ದೇವರ ಸ್ಮರಣೆ, ಆರಾಧನೆಯಿಂದ ಧನಾತ್ಮಕ ಶಕ್ತಿ ಹೆಚ್ಚಿ ಸನ್ಮಾರ್ಗದತ್ತ ನಡೆಯುವಂತೆ ಮಾಡುತ್ತದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರಶೇಖರ, ಅರ್ಚಕ ಕೆ.ಎಂ.ಚಂದ್ರಶೇಖರಸ್ವಾಮಿ, ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಪ್ರಮುಖರಾದ ಎಚ್.ಎಂ.ಜಗದೀಶ, ಯೋಗಾಚಾರ್, ಎಸ್.ರಾಮಪ್ಪ, ಜೀರ್ ಲೋಕೇಶ್, ಸಿದ್ದರಾಮಪ್ಪ, ಬಿ.ಎಂ.ಪುಷ್ಪಾ ರುದ್ರಯ್ಯ ಇತರರಿದ್ದರು.