ಜಿಲ್ಲೆ

ಮೂಲದಾಖಲಾತಿ ಸೃಷ್ಟಿಸಲು ಮನವಿ ಸಲ್ಲಿಸಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ರೈತರು ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಅವರ ಮನೆಬಾಗಿಲಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಡಿಸಿ ಎಂ.ಎಸ್.ದಿವಾಕ ಹೇಳಿದರು.

ಪಟ್ಟಣದ ಎಂ.ವೈ.ಘೋರ್ಪಡೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ಪರ್ಧೆಯ ಸಮಾರೋಪ ಸಮಾರಂಭದ ನಂತರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರ ಪಹಣಿ ಪೋಡಿ, ಪಾಲುವಿಭಾಗ ಮಾಡಿಸುವಲ್ಲಿ ಕಚೇರಿಗೆ ಅಲೆದಾಟ, ನಾಲ್ಕಾರು ವರ್ಷಗಳಾದರೂ ರೈತರ ಗೋಳು ತಪ್ಪುತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಾಲೀಕರಲ್ಲಿ ಮೂಲ ದಾಖಲಾತಿ ಇದ್ದರೆ ಯಾವುದೇ ಕೆಲಸಗಳು ವಿಳಂಬವಾಗುವುದಿಲ್ಲ ಎಂದರು. ದಾಖಲಾತಿಗಳು ಮಾಲೀಕರಲ್ಲೂ ಇಲ್ಲ, ಕಚೇರಿಯಲ್ಲೂ ಸರಿಯಾಗಿ ದೊರೆಯುತ್ತಿಲ್ಲ ಎಂದಾದರೆ ತಿದ್ದುಪಡಿಗೆ ಅಥವಾ ಮೂಲದಾಖಲಾತಿ ಸೃಷ್ಟಿಸಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು.

ತುಂಗಭದ್ರಾ ಹಿನ್ನೀರಿನ ಮುಳುಗಡೆ ಪ್ರದೇಶಗಳ ನಿವಾಸಿಗಳು ದಾಖಲಾತಿಗಳಿಲ್ಲದೆ ಪರದಾಡುವಂತಾಗಿದೆ ಎಂದು ಡಿಸಿ ಗಮನ ಸೆಳೆದಾಗ, ಅದರ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಪಟ್ಟಣದ ರೈಲ್ವೇ ಮೇಲ್ಸೇತುವೆ ನಿರ್ಮಾಣ ಹಂತಹಂತವಾಗಿ ಕಾಮಗಾರಿ ನಡೆಯಲಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಜಿಪಂ.ಮಾಜಿ ಸದಸ್ಯ ಗಾದಿಗನೂರು ಹಾಲಪ್ಪ, ತಹಸೀಲ್ದಾರ್ ಕವಿತಾ ಹಾಗೂ ಬಿಇಒ ಮೈಲೇಶ್ ಬೇವೂರ್ ಇದ್ದರು.