ಮಾಜಿ ಶಾಸಕರ ಸಂಘದ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ  
ಜಿಲ್ಲೆ

ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಸಲ್ಲದು: ಎಚ್ಎಂಸಿ

ಶಿವಮೊಗ್ಗ: ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕರ ಸಂಘದ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಬೇಸರ ವ್ಯಕ್ತಪಡಿಸಿದರು.

ನನ್ನನ್ನೂ ಒಳಗೊಂಡಂತೆ ಪಕ್ಷದಲ್ಲಿ ಮಾಜಿ ಶಾಸಕರು, ಹಿರಿಯರನ್ನು ನಿರ್ಲಕ್ಷೃ ಮಾಡಲಾಗುತ್ತಿದೆ. ಇಂದು ಅಂತಹ ಘಟನೆಗಳು ಪಕ್ಷದಲ್ಲಿ ಆಗುತ್ತಿದ್ದು ಅದಕ್ಕೆ ಕಡಿವಾಣ ಬೀಳಬೇಕಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಮಾತ್ರವಲ್ಲ, ಯಾವುದೇ ಪಕ್ಷವಾದರೂ ಹಿರಿಯರನ್ನು ಗೌರವದಿಂದ ಕಾಣಬೇಕು. ಪ್ರೀತಿ, ವಿಶ್ವಾಸದಿಂದ ನಡೆಸಿಕೊಳ್ಳಬೇಕು. ಹಿರಿಯ ಮಾರ್ಗದರ್ಶನ ಪಡೆದುಕೊಳ್ಳಬೇಕು. ಎಲ್ಲ ಧರ್ಮದವರನ್ನೂ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದು ಮನವಿ ಮಾಡಿದರು.
ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ. ಅದರಲ್ಲೂ ಜನಸೇವೆ ಮಾಡುವ ರಾಜಕಾರಣಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇತ್ತೀಚಿಗೆ ಬಿಸಿಲಿನ ಜಳ ಹೆಚ್ಚಾಗಿ ಮಕ್ಕಳು ವಯೋವೃದ್ಧರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರ ಉಚಿತ ಚಿಕಿತ್ಸೆ ನೀಡಬೇಕು ಎಂದರು.
ಒಂದು ಧರ್ಮದ ಮೇಲೆ ಮತ ಪಡೆಯಲು ಆಗಲ್ಲ, ಎಲ್ಲ ಧರ್ಮದವರನ್ನು ಪ್ರೀತಿಸಬೇಕು. ಹಾಗಿದ್ದಲ್ಲಿ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದ ಅವರು, ಇತ್ತೀಚಿಗೆ ನಡೆಯುತ್ತಿರುವ ಹತ್ಯೆ, ಕೋಮು ಗಲಭೆ, ಪೆನ್‌ಡ್ರೈವ್‌ನಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು. ಭದ್ರಾವತಿಯ ವಿಐಎಸ್‌ಎಲ್, ಎಂಪಿಎಂ ಹಾಗೂ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂದು ಮನವಿ ಮಾಡಿದರು.