ಚಿಟಗುಪ್ಪ: ಪಠ್ಯದೊಂದಿಗೆ ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ ಪ್ರಚಲಿತ ವಿಷಯಗಳ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಮಂಜುನಾಥ ಪಂಚಾಳ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯದ ಜತೆಗೆ ಪೂರಕ ವಿಷಯಗಳನ್ನು ಅಧ್ಯಯನ ಮಾಡಬೇಕು. ಭಾಷಾ-ಜ್ಞಾನ, ಸಂದರ್ಶನ ಕೌಶಲ ಬೆಳೆಸಿಕೊಂಡು ಯಶಸ್ವಿಯಾಗಬೇಕು ಎಂದು ಹೇಳಿದರು.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಜ್ಞಾನದ ಸಾಮರ್ಥ್ಯ ಆಗಾಧವಾಗಿರುತ್ತದೆ. ಕಲಿಕೆಯ ಆಸಕ್ತಿ ಸಹ ಸೂಕ್ಷ್ಮವಾಗಿರುತ್ತದೆ. ಆದರೆ ಇದನ್ನು ಅಭಿವ್ಯಕ್ತಗೊಳಿಸುವ ಹಿಂಜರಿಕೆಯಿಂದ ಅವಕಾಶ ವಂಚಿತರಾಗುತ್ತಾರೆ. ಆದರಿಂದ ಸ್ವ-ಸಾಮರ್ಥ್ಯದ ವಿಶ್ವಾಸ ಮತ್ತು ಸಾಧನೆಯ ಹಸಿವು ಕಿಚ್ಚು ಹೆಚ್ಚಿಸಿಕೊಂಡು ಯಶಸ್ಸು ಸಾಧಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಯಕುಮಾರ ಸಿಂಧೆ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಭವಿ ಪ್ರಾಧ್ಯಾಪಕರ ಬೋಧನೆ ಜತೆ ಆಧುನಿಕ ಕಂಪ್ಯೂಟರ್, ಪ್ರಯೋಗಲಾಯ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ, ವಿಷಯ ತಜ್ಞರಿಂದ ವಿಶೇಷ ಉಪನ್ಯಾಸ ಸೇರಿ ಪ್ರತಿಯೊಂದು ಸೌಲಭ್ಯ ಒದಗಿಸಲಾಗುತ್ತಿದ್ದು, ಇದರ ಲಾಭ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಪ್ರಾಧ್ಯಾಪಕ ಡಾ ಅರುಣಕುಮಾರ ಕುರನೆ ಉಪನ್ಯಾಸ ನೀಡಿದರು. ಡಾ.ವೀರಶೆಟ್ಟಿ ಮೈಲೂರಕರ ಪ್ರಾಸ್ತಾವಿಕ ಮಾತನಾಡಿದರು.
ಕೋಶದ ಸಂಯೋಜಕ ಡಾ.ಕೆ.ಶಿವಕುಮಾರ, ಡಾ.ರವೀಂದ್ರಕುಮಾರ ಟೀಳೆಕರ, ಹಿರಿಯ ಪ್ರಾಧ್ಯಾಪಕ ಡಾ.ಮೀನಾಕುಮಾರಿ, ಮೀನಾಕ್ಷಿ, ಡಾ.ಸತೀಶಕುಮಾರ ಡೊಂಗ್ರೆ, ಡಾ.ಶೇಷರಾವ, ಜಬಿವುಲ್ಲಾ, ರಮೇಶಕುಮಾರ ಬಿರಾದಾರ ಇತರರಿದ್ದರು.
ಡಾ ಚಿತ್ರಶೇಖರ ಚಿರಳ್ಳಿ ನಿರೂಪಣೆ ಮಾಡಿದರು. ಶಾಂತಕುಮಾರ ಪಾಟೀಲ್ ಸ್ವಾಗತಿಸಿದರು. ಡಾ.ಯೆಸುಮಿತ್ರ ವಂದಿಸಿದರು.
ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನದ ಮೂಲಕ ಜೀವನ ರೂಪಿಸಿಕೊಳ್ಳಬೇಕು. ಯಾವುದೆ ಗುರಿ ಸಾಧಿಸಬೇಕಾದರೆ ಮೊದಲು ದೃಡ ಸಂಕಲ್ಪ ಹೊಂದಬೇಕು, ಅದಕ್ಕೆ ಪೂರಕವಾದ ಸಿದ್ಧತೆಯನ್ನು ನಿರಂತರವಾಗಿ ಮುಂದುವರೆಸಬೇಕು. ಇಂಗ್ಲಿಷ್ ಭಾಷೆ ಜ್ಞಾನ, ವ್ಯಕ್ತಿತ್ವ ವಿಕಸನ, ಜೀವನ ಕೌಶಲ ಹಾಗೂ ಸಹಬಾಳ್ವೆ ತತ್ವ ಪಡೆದರೆ ಯಶಸ್ಸು ಖಂಡಿತ ಸಾಧ್ಯ.
|ಡಾ.ಅರುಣಕುಮಾರ ಕುರನೆ ಪ್ರಾಧ್ಯಾಪಕ ಗುಲ್ಬರ್ಗ ವಿವಿ ಎಂಬಿಎ ವಿಭಾಗ