ಹುಣಸೂರು : ಜಿಲ್ಲೆಯಲ್ಲಿ ಸೆ.8 ರಿಂದ 22ರವರೆಗೆ ಸಂಘಟನಾ ಸಭೆ ಆಯೋಜಿಸಲಾಗಿದೆ ಎಂದು ರೈತಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದೆ. 384 ದಿನ ರೈತ ಆಂದೋಲನ ನಡೆದಾಗ ಕೇಂದ್ರ ಸರ್ಕಾರ ರೈತ ಸಮುದಾಯ ನೆರವಿಗೆ ಬರುವುದಾಗಿ ಹೇಳಿತ್ತು. ಕೃಷಿ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಖಾತ್ರಿಗೊಳಿಸುವುದಾಗಿ ತಿಳಿಸಿತ್ತು. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದಿಲ್ಲ ಮತ್ತು ಇತರೆ ರೈತಪರ ನೀತಿಗಳನ್ನು ಜಾರಿಗೆ ತರುವುದಾಗಿ ಲಿಖಿತವಾಗಿ ಬರೆದುಕೊಟ್ಟಿತ್ತು. ಆದರೆ ಕೊನೆಗೆ ಮಾತಿಗೆ ತಪ್ಪಿದೆ ಎಂದು ಪ್ರಕಟಣೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಹಿಂಬಾಗಿಲಿನಿಂದ ಒಂದೊಂದಾಗಿ ಜಾರಿಗೆ ತರುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಹಿತ ಕಾಪಾಡಲು ಬೇರೆ ದೇಶಗಳು ನಿಷೇಧಿಸಿರುವ ಕುಲಾಂತರಿ ತಳಿಗಳನ್ನು ರೈತರ ಭೂಮಿಗೆ ಇಳಿಸಲು ಹುನ್ನಾರ ನಡೆಸುತ್ತಿವೆ. ಇನ್ನು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಇದುವರೆವಿಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ಸುಪಡೆದಿಲ್ಲ ಎಂದು ಕಿಡಿಕಾಡಿದ್ದಾರೆ.
ಕೇಂದ್ರ ಸರ್ಕಾರದ ವಿದ್ಯುತ್ ನೀತಿ ಜಾರಿಗೆ ತರಲು ಮುಂದಾಗಿ ಕೃಷಿ ಪಂಪ್‌ಸೆಟ್‌ದಾರರ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿ ಮುಂದೆ ಸ್ಮಾರ್ಟ್ ಮೀಟರ್ ಅಳವಡಿಸುವ ಹುನ್ನಾರ ನಡೆಸಿದೆ. ಕೃಷಿ ಪಂಪ್ ಸೆಟ್‌ಗಳಿಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ಲಕ್ಷಾಂತರ ರೂ. ಹೊರೆ ಅನುಭವಿಸುವ ನೀತಿಯನ್ನು ರೂಪಿಸಿದೆ. ಗಣಿಗಾರಿಕೆಗೆ ಅವಕಾಶ ನೀಡಿ ಗಣಿ ಸುತ್ತಮುತ್ತ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ನೀತಿಯನ್ನು ಮುಂದುವರೆಯಲು ಬಿಟ್ಟರೆ ರೈತಕುಲ ಸಂಪೂಣವಾಗಿ ನಾಶವಾಗುತ್ತದೆ. ಈ ಕಾರಣದಿಂದ ರೈತ ಚಳುವಳಿಯನ್ನು ತಾಲೂಕು, ಜಿಲ್ಲಾ ಮತ್ತು ರಾಜ್ಯದಲ್ಲಿ ಮತ್ತಷ್ಟು ಬಲಗೊಳಿಸಬೇಕಾಗಿದೆ. ಪ್ರತಿ ರೈತ ಕುಟುಂಬಕ್ಕೊಬ್ಬ ಸದಸ್ಯ- ಊರಿಗೊಬ್ಬ ಕಾರ್ಯಕರ್ತ ಎಂಬ ಉದ್ದೇಶದೊಂದಿಗೆ ಪ್ರತಿ ಹಳ್ಳಿಯಲ್ಲೂ ಸಂಘಟನೆಯನ್ನು ಕಟ್ಟಿ ಬೆಳೆಸಬೇಕಾಗಿದೆ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇವುಗಳ ಪರಿಹಾರಕ್ಕಾಗಿ ಸ್ಥಳೀಯವಾಗಿಯೇ ದೊಡ್ಡ ಹೋರಾಟವನ್ನು ರೂಪಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಸೆ.8ರಿಂದ ಜಿಲ್ಲೆಯಲ್ಲಿ ಸಭೆಗಳು ಆರಂಭಗೊಳ್ಳಲಿವೆ. ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಬಡಗಲಾಪುರ ನಾಗೇಂದ್ರ ವಹಿಸಲಿದ್ದಾರೆ. ಸಂಘದ ಇತರ ರಾಜ್ಯ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲೆಲ್ಲಿ ಯಾವಾಗ ಸಭೆ? :
ಸೆ.8ರಂದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು, ಸೆ.14ರಂದು ನಂಜನಗೂಡು, ಸೆೆ.15ರಂದು ತಿ.ನರಸೀಪುರ, ಸೆ.19 ಹುಣಸೂರು, ಸೆ.20 ಮೈಸೂರು ತಾಲೂಕು, ಸೆ.21ರಂದು ಎಚ್.ಡಿ.ಕೋಟೆ ಮತ್ತು ಸರಗೂರು ಮತ್ತು ಸೆ.22ರಂದು ಪಿರಿಯಾಪಟ್ಟಣ ತಾಲೂಕಿನಲ್ಲಿ ಸಭೆ ಆಯೋಜನೆಗೊಂಡಿದೆ.