ಮಂಡ್ಯ: ಲೋಕಸಭಾ ಚುನಾವಣೆಯ ಮತ ಎಣಿಕೆ ದಿನದಂದು ಸಹಾಯಕ ಚುನಾವಣಾಧಿಕಾರಿ, ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಮೈಕ್ರೋ ಅಬ್ಸರ್ವರ್‌ಗಳು ತಮ್ಮ ಕರ್ತವ್ಯವನ್ನು ಜಾಗರೂಕತೆಯಿಂದ ನಿಭಾಯಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇವಿಎಂ ಮತ್ತು ಅಂಚೆ ಮತ ಏಣಿಕೆ ಸಿಬ್ಬಂದಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಂಚೆ ಮತ ಎಣಿಕೆಯು ಬಹಳ ಮುಖ್ಯವಾಗಿರುವದರಿಂದ ಯಾವುದೇ ಲೋಪದೋಷವಾಗದಂತೆ ನೋಡಿಕೊಳ್ಳಬೇಕು. ಪ್ರಮುಖವಾಗಿ ಗೊಂದಲಮಯ ವಾತಾವರಣ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಮತ ಎಣಿಕೆ ದಿನದಂದು ಸಿಬ್ಬಂದಿ ಬೆಳಗ್ಗೆ 7 ಗಂಟೆಯೊಳಗೆ ಕಡ್ಡಾಯವಾಗಿ ಹಾಜರಾಗಬೇಕು. ಸಬೂಬು ಹೇಳಿ ಯಾರು ಕೂಡ ತಡ ಮಾಡಬಾರದು. ನಿಮಗೆ ನೀಡಿರುವಂತಹ ಗುರುತಿನ ಚೀಟಿಯನ್ನು ಪೊಲೀಸ್ ಅವರಿಗೆ ತೋರಿಸಿ ಒಳಗೆ ಬರಬೇಕು. ಮತ ಎಣಿಕೆ ದಿನದಂದು ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ವಯ ನಿಗದಿತ ಕಾಲಾವಧಿಯಲ್ಲಿ ಯಾವುದೇ ಲೋಪಕ್ಕೆ ಅವಕಾಶ ಕೊಡದೆ ಚುನಾವಣಾ ಮತ ಎಣಿಕೆ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.