ಸೋಮವಾರಪೇಟೆ: ಕಾಫಿ ಬೆಳೆಗಾರರು ಸಂಘಟಿತ ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಭಾರತ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಅಭಿಪ್ರಾಯಪಟ್ಟರು.
ಶನಿವಾರ ತಾಲೂಕು ಕಾಫಿ ಬೆಳೆಗಾರರ ಸಂಘದ ಕಚೇರಿಗೆ ಆಗಮಿಸಿ, ಬೆಳೆಗಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.
ಭಾರತದಲ್ಲಿ ಗುಣಮಟ್ಟದ ಕಾಫಿ ಉತ್ಪಾದಿಸಲೇಬೇಕಾದ ಅನಿವಾರ್ಯತೆ ಒದಗಿದೆ. ಕಾಫಿ ಬೆಳೆಯುವ ರಾಷ್ಟ್ರಗಳನ್ನು ಹೊರತುಪಡಿಸಿ, ಚೀನಾ ಸೇರಿದಂತೆ ಇತರ ರಾಷ್ಟ್ರಗಳಲ್ಲೂ ಕಾಫಿ ಬೆಳೆಯುತ್ತಿದ್ದಾರೆ. ಮುಂದಿನ 50 ವರ್ಷಗಳಿಗೆ ಬೇಕಾಗುವಷ್ಟು ಕಾಫಿ ಉತ್ಪಾದನೆಗೆ ಗುರಿ ನಿಗದಿಯಾಗಿದೆ. ಪ್ರಪಂಚದ ಮೂರು ಬೃಹತ್ ಕಂಪನಿಗಳು ನೇತೃತ್ವದ ವಹಿಸಿಕೊಂಡಿವೆ. ಬೆಳೆಗಾರರು ಎಚ್ಚರ ವಹಿಸಿಕೊಳ್ಳಬೇಕು. ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಕಾಫಿ ಮಂಡಳಿಯ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಫಿ ಉದ್ದಿಮೆ ಪುನಶ್ಚೇತನಕ್ಕೆ ಪ್ರಸಕ್ತ ವರ್ಷ ಕಾಫಿ ಮಂಡಳಿಯಿಂದ 307 ಕೋಟಿ ರೂ.ಗಳನ್ನು ಅನುದಾನ ಬಿಡುಗಡೆಗೊಂಡಿದೆ. ಕಾಫಿ ಬೆಳೆಗಾರರಿಗೆ ಸಹಾಯಧನ ನೀಡಲಾಗುತ್ತಿದೆ. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾಫಿ ಬೆಳೆಗಾರರ ಸಂಘದ ವತಿಯಿಂದ ಕಾಫಿ ಬೆಳೆಗಾರರನ್ನು ಸಂಘಟಿಸಿ ಸಭೆ ಏರ್ಪಡಿಸಿದರೆ ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು ಕಾಫಿ ಉತ್ಪಾದನೆ, ಮಾರುಕಟ್ಟೆ ಬಗ್ಗೆ ಮಾಹಿತಿ ಒದಗಿಸಲಿದ್ದಾರೆ ಎಂದರು.
ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ಜಿಲ್ಲೆಯ ಮಟ್ಟಿಗೆ ಅರೇಬಿಕಾ ಕಾಫಿಯನ್ನು ಅತಿ ಹೆಚ್ಚು ಸೋಮವಾರಪೇಟೆ ತಾಲೂಕಿನಲ್ಲಿ ಬೆಳೆಯಲಾಗುತ್ತಿದ್ದು, ಕಾಫಿ ಕೃಷಿ ಅವನತಿಯತ್ತ ಸಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಈಗಾಗಲೇ ಹೆಚ್ಚಿನ ಅರೇಬಿಕಾ ಬೆಳೆಗಾರರು ರೊಬಸ್ಟಾ ಕಾಫಿ ಬೆಳೆಯಲು ಮುಂದಾಗಿದ್ದಾರೆ. ಅರೇಬಿಕಾ ಕಾಫಿ ಕಣ್ಮರೆ ಆಗುವುದನ್ನು ತಪ್ಪಿಸಲು ಕಾಫಿ ಮಂಡಳಿ ಮತ್ತು ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಬೇಕು. ಕ್ರಿಮಿನಾಶಕ, ಗೊಬ್ಬರ, ಕಾಪರ್ ಸಲ್ಪೈಟ್ ಸೇರಿದಂತೆ ಎಲ್ಲದಕ್ಕೂ ಇನ್ನೂ ಹೆಚ್ಚಿನ ಸಹಾಯಧನ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ದಾಖಲೆಯ ಮಳೆಗೆ ಕಾಫಿ ನಷ್ಟವಾಗಿದ್ದು, ಬೆಳೆಗಾರರ ಫಸಲು ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಕ್ರಮ ವಹಿಸಬೇಕು. ವೇದಿಕೆಯಲ್ಲಿ ಕಾಫಿ ಮಂಡಳಿ ಸದಸ್ಯ ಕಿಶೋರ್, ಹಿರಿಯ ಕಾಫಿ ಬೆಳೆಗಾರರಾದ ಎಸ್.ಜಿ.ಮೇದಪ್ಪ, ಬಿ.ಡಿ. ಮಂಜುನಾಥ್, ಲವಕುಮಾರ್ ಇತರರು ಇದ್ದರು.