ಹುಬ್ಬಳ್ಳಿ: ಶಾಲಾ-ಕಾಲೇಜ್ಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರು ಅಜರಾಮರಗೊಳಿಸಬೇಕು. ಇದಕ್ಕೆ ನಮ್ಮಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು.
ಸರ್ ಸಿದ್ದಪ್ಪ ಕಂಬಳಿ ಅವರ ಸ್ಮರಣಾರ್ಥ ನಗರದ ಅಳಗುಂಡಗಿ ಓಣಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ ಸಿದ್ದಪ್ಪ ಕಂಬಳಿ ಮೆಮೋರಿಯಲ್ ಮ್ಯೂಸಿಯಂ ಲೋಕಾರ್ಪಣೆ ಹಾಗೂ ಸರ್ ಸಿದ್ದಪ್ಪ ಕಂಬಳಿ ಮೆಮೋರಿಯಲ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ ಸಿದ್ದಪ್ಪ ಕಂಬಳಿ ಅವರದು ದೊಡ್ಡ ವ್ಯಕ್ತಿತ್ವ. ಮುಂಬೈ ಪ್ರೆಸಿಡೆನ್ಸಿಯಲ್ಲಿ ಪ್ರಮುಖ 7 ಖಾತೆಗಳನ್ನು ನಿಭಾಯಿಸಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅವರಂಥವರಿಗೆ ಪ್ರೊಫೆಸರ್ ಹುದ್ದೆ ನೀಡಿದ್ದರು. ಮಹಾತ್ಮ ಗಾಂಧಿ ಅವರಿಗೂ ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು. ಅವರ ಪ್ರಭಾವಳಿ ಆಗಿನ ದಿನಗಳಲ್ಲಿ ಹೆಚ್ಚಿಗೆ ಇತ್ತು. ನಮ್ಮ ಹುಬ್ಬಳ್ಳಿಯವರೇ ಆದ ಕಂಬಳಿ ಅವರ ಹೆಸರು ಚಿರಸ್ಥಾಯಿಸಿಗೊಳಿಸುವ ಅಗತ್ಯವಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರದಲ್ಲೂ ಬದುಕುವವ ನಿಜವಾದ ಸಾಧಕ. ಕಾಲ-ಗಡಿ ಮೀರಿದ ವ್ಯಕ್ತಿತ್ವ ಸರ್ ಸಿದ್ದಪ್ಪ ಕಂಬಳಿ ಅವರದು. ಇವರು ಬೇರೆ ಭಾಗದಲ್ಲಿ ಇದ್ದಿದ್ದರೆ ಬಹಳಷ್ಟು ಪ್ರಚಾರ ಸಿಕ್ಕಿರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಅವರ ಹೆಸರು ಉಳಿಯಲು ಧಾರವಾಡ ಜಿಲ್ಲೆಯಲ್ಲಿ ಪ್ರತಿ ವರ್ಷ ಸರ್ ಸಿದ್ದಪ್ಪ ಕಂಬಳಿ ಅವರ ಹೆಸರಿನಲ್ಲಿ ಸಮ್ಮೇಳನ ಆಯೋಜಿಸಬೇಕು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸರ್ ಸಿದ್ದಪ್ಪ ಕಂಬಳಿ ಅವರ ಅಗಾಧ ಜ್ಞಾನ ಭಂಡಾರಕ್ಕೆ ಎಲ್ಲರೂ ತಲೆದೂಗಲೇಬೇಕು. ಅವರ ಸಾಧನೆಗಳು ಯುವಕರಿಗೆ ಮಾರ್ಗದರ್ಶನ ನೀಡುವಂತಾಗಬೇಕು ಎಂದರು.
ಡಾ. ಭರತೇಶ ಶಿರಿಯಪ್ಪಗೌಡರ್, ಸರ್ ಸಿದ್ದಪ್ಪ ಕಂಬಳಿ ಅವರ ಬಗ್ಗೆ ಉಪನ್ಯಾಸ ನೀಡಿದರು. ಮ್ಯೂಸಿಯಂ ರೂಪುಗೊಳಿಸಿದ ಸಂತೋಷ ರೇವಣಕರ ಹಾಗೂ ಕೆಲವರನ್ನು ಸನ್ಮಾನಿಸಲಾಯಿತು. ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು.
ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ನೀಲಕಂಠ ಅಸೂಟಿ, ಟ್ರಸ್ಟ್ ಅಧ್ಯಕ್ಷ ವೀರೇಶ ಕುಲಕರ್ಣಿ, ಉಪಾಧ್ಯಕ್ಷರಾದ ಲಿಂಗರಾಜ ಕಂಬಳಿ, ಸರೋಜಿನಿ ಕಂಬಳಿ, ಕೆಎಲ್ಇ ತಾಂತ್ರಿಕ ವಿವಿಯ ಉಪ ಕುಲಪತಿ ಡಾ. ಅಶೋಕ ಶೆಟ್ಟರ್ ಇತರರು ಇದ್ದರು.