ಮಡಿಕೇರಿ: ಎನ್‌ಎಸ್‌ಎಸ್ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದರಿಂದ ಜೀವನದ ಅರ್ಥ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮೇ.ಡಾ.ರಾಘವ ಹೇಳಿದರು.
ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯಲ್ಲಿ ಮಡಿಕೇರಿ ತಾಲೂಕಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ೨೦೨೨-೨೦೨೩ನೇ ಸಾಲಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ನಾಯಕತ್ವದ ಜತೆಗೆ ಜೀವನವನ್ನು ತಿಳಿಸುತ್ತದೆ. ಭಿನ್ನತೆಗಳ ನಡುವೆ ಐಕ್ಯತೆ ಬೆಸೆಯುತ್ತದೆ. ಎಲ್ಲರನ್ನೂ ಒಂದೇ ಎಂದು ಪ್ರೀತಿಸುತ್ತದೆ ಎಂದ ಅವರು, ಸಮಾಜ ಅಥವಾ ಇತಿಹಾಸ ಸದಾ ನೆನಪಿಟ್ಟುಕೊಳ್ಳುವುದು ಸಾಧನೆಯನ್ನು ಮಾತ್ರ. ಸಾಧನೆಯು ವ್ಯಕ್ತಿಯ ಕೀರ್ತಿಯನ್ನು ಎತ್ತರಕ್ಕೇರಿಸುತ್ತದೆ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರ ಹೆಸರನ್ನು ಪ್ರಸ್ತಾಪಿಸುವ ಮೂಲಕರವರ ಸಾಧನೆ ನೆನಪಿಸಿ, ಇಡೀ ವಿಶ್ವವೇ ಅವರನ್ನು ಗೌರವಿಸುತ್ತದೆ. ಅದಕ್ಕೆ ಕಾರಣ ಅವರ ಸಾಧನೆಯಾಗಿದೆ. ಅಂತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡಲ್ಲಿ ನಮ್ಮ ಭವಿಷ್ಯ ಸುಂದರವಾಗುವುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಒಂದು ಜೀವನ ಪಾಠವಾಗಿದೆ. ಆದ್ದರಿಂದ ಇಂತಹ ಘಟಕಗಳಲ್ಲಿ ವಿದ್ಯಾರ್ಥಿಗಳು ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.
ನೇತಾಜಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಎ.ಕೆ.ಮನು ಮುತ್ತಪ್ಪ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿದೆ. ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ. ಜನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಕೊಡುವ ಕಾರ್ಯವನ್ನು ಈ ಶಿಬಿರಗಳು ಮಾಡುತ್ತವೆ. ವಿದ್ಯಾರ್ಥಿಗಳು ಎನ್.ಎಸ್.ಎಸ್ ನಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಸಾಧ್ಯ ಎಂದರು.
ಪ್ರಮುಖರಾದ ಮಚ್ಚೂರ ರವೀಂದ್ರ ಮಾತನಾಡಿ, ವಿದ್ಯಾರ್ಥಿ ಆರಂಭದಿಂದಲೇ ಜೀವನ ಪಾಠ ಹಾಗು ಸಮಾಜದಲ್ಲಿ ಯಾವ ರೀತಿ ಬಾಳ್ವೆ ನಡೆಸಬೇಕೆನ್ನುವುದನ್ನು ಎನ್.ಎಸ್.ಎಸ್ ಕಲಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಎನ್.ಎಸ್.ಎಸ್ ಧ್ಯೇಯವನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಏಳು ದಿನಗಳ ಎನ್‌ಎಸ್‌ಎಸ್ ಶಿಬಿರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪ್ರಥಮ ವರ್ಷದ ವೈಷ್ಣವಿ.ಎಸ್, ಅನನ್ಯ, ಮಹೇಂದ್ರ ಹಾಗೂ ದ್ವಿತೀಯ ವರ್ಷದ ಸೃಷಿ, ಪ್ರಮತೇಶ್ ಅತ್ಯುತ್ತಮ ಸ್ವಯಂಸೇವಕ ಹಾಗು ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಎಫ್.ಎಂ.ಸಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರದೀಪ್ ಭಂಡಾರಿ, ಎನ್.ಎಸ್.ಎಸ್ ಅಧಿಕಾರಿ ಡಾ.ಮಹದೇವಯ್ಯ, ಡಾ.ಗಾಯತ್ರಿ, ಸಹ ಶಿಬಿರಾಧಿಕಾರಿಗಳಾದ ಸಚಿನ್, ಮಂಜುನಾಥ್, ಖುರ್ಷಿದಾ ಭಾನು, ಪ್ರಮುಖರಾದ ಮಣವಟ್ಟೀರ ಹರೀಶ್, ಮಾಳೆಯಡ ವಿಜು ಅಪ್ಪಚ್ಚು, ಹಿರಿಯ ಸ್ವಯಂ ಸೇವಕರಾದ ಚರಣ್, ಚಂದನ್ ನಂದರಬೆಟ್ಟು ಮತ್ತಿತರರು ಹಾಜರಿದ್ದರು.