ಮಡಿಕೇರಿ: ಶಾಲೆಗಳಿಗೆ ಸಾಹಿತ್ಯವನ್ನು ಕೊಂಡೊಯ್ಯುವ ಮೂಲಕ ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತರನ್ನಾಗಿ ಮಾಡಿ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ ಪ್ರತಿಯೊಂದು ಶಾಲೆಗಳಲ್ಲಿ ವ್ಯವಸ್ಥಿತವಾಗಿ ನಡೆಯಬೇಕೆಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾಕತ್ತೂರು ಸರ್ಕಾರಿ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಾಕತ್ತೂರು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಬಿ.ಆರ್.ಸಾಯಿನಾಥ್ ಮತ್ತು ತ್ರಿಭಾಷಾ ಸಾಹಿತಿ ಮುಲ್ಲೇಂಗಡ ದಿ.ಬೇಬಿ ಚೋಂದಮ್ಮರವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗಿನ ಮಹಿಳಾ ಸಾಹಿತ್ಯದಲ್ಲಿ ಕಥೆಗಾರ್ತಿ ಗೌರಮ್ಮರವರ ಸಾಧನೆಯ ಕುರಿತು ಶ್ಲಾಘಿಸಿದ ದೊಡ್ಡೇಗೌಡರು, ನಂಜನಗೂಡು ತಿರುಮಲಾಂಭ ಕಲ್ಯಾಣಮ್ಮನವರ ಸಮಕಾಲೀನರಾಗಿ ಗೌರಮ್ಮನವರು ಬರೆದ ಪುಸ್ತಕಗಳು ಇಂದು ಓದುಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಹತ್ತನೇ ಶತಮಾನದ ಕವಿ ನಾಗವರ್ಮ ೧೫ನೇ ಶತಮಾನದ ಜೈನ ಕವಿ ದೇವಪ್ಪ, ರೆ.ಫಾ.ಕಿಟೆಲ್ ಅನಂತರ ಪಂಜೆ ಮಂಗೇಶರಾಯರು, ಭಾರತೀಸುತರು, ಗೌರಮ್ಮ, ಡಿ.ಎನ್.ಕೃಷ್ಣಯ್ಯನವರು ಕೊಡಗಿನಲ್ಲಿ ಬೆಳೆಸಿದ ಕನ್ನಡ ಸಾಹಿತ್ಯ ಚಿಗುರೊಡೆದು, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಇದೀಗ ಸಮೃದ್ಧಗೊಳ್ಳುತ್ತಿದೆ. ಕೊಡಗು ಸಸ್ಯಶ್ಯಾಮಲೆಯ ನಾಡಾಗಿದ್ದು, ಪ್ರವಾಸೋದ್ಯಮದ ಬೆಳವಣಿಗೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಡೆಗಟ್ಟಬೇಕಾಗಿದೆ. ಸುಂದರ ಪರಿಸರದ ನಾಡಿನಲ್ಲಿ ಸಾಹಿತ್ಯ ರಚನೆಗೆ ಇಂಬು ನೀಡುವ ಕೆಲಸಗಳಾಗಬೇಕಾಗಿದೆ ಎಂದು ದೊಡ್ಡೇಗೌಡರು ಹೇಳಿದರು.
ಬಿ.ಆರ್.ಸಾಯಿನಾಥ್ ದತ್ತಿ ಉಪನ್ಯಾಸದಲ್ಲಿ ಭಾಗಿಯಾದ ಕವಯಿತ್ರಿ ಕೆ.ಜಿ.ರಮ್ಯ ಮಾತನಾಡಿ, ಸುವರ್ಣ ಕರ್ನಾಟಕ ೫೦ರ ಸಂಭ್ರಮದಲ್ಲಿ ಶಾಲೆಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ದತ್ತಿ ರೂಪದಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಪರಿಚಯ ಮಾಡಲು ಒಳ್ಳೆಯ ವೇದಿಕೆಯಾಗಿದೆ ಎಂದರು.
ಕವಿ ಕಾವ್ಯ ಪರಿಚಯದ ಬಗ್ಗೆ ಮಾತನಾಡಿದ ಅವರು, ಕಾವ್ಯ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಅನ್ಯತೆಯನ್ನು ಹೋಗಲಾಡಿಸಿ ಅನನ್ಯತೆಯಿಂದ ಕಾವ್ಯಗಳ ರಚನೆ ಆಗಬೇಕಾಗಿದೆ. ಮಾನವೀಯತೆ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಮನುಷ್ಯತ್ವವನ್ನು ಬೆಳೆಸುವ ಜವಬ್ದಾರಿ ಕವಿಗಳ ಮೇಲಿದೆಯೆಂದು ಸಲಹೆ ನೀಡಿದ ಅವರು, ಜನಪದ ಸಾಹಿತ್ಯದಿಂದ ಕಾವ್ಯಗಳು ಆರಂಭಗೊಂಡಿದ್ದು, ಭಾವನೆಗಳಲ್ಲಿ ಆತ್ಮಸಂಚಲನ ಕಾವ್ಯ ಪ್ರಕಾರವಾಗಿದೆಯೆಂದು ನುಡಿದರು.
ಸಾಹಿತಿ ಗೌರಮ್ಮ ಮಾದಮ್ಮಯ್ಯ ಮಾತನಾಡಿ, ತ್ರಿಭಾಷಾ ಸಾಹಿತಿ ದಿ.ಬೇಬಿ ಚೋಂದಮ್ಮರವರು ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಕೊಡವ ಭಾಷಾ ಸಾಹಿತ್ಯದಲ್ಲಿ ಪ್ರವೀಣರಾಗಿದ್ದಾರೆ. ಕೊಡಗಿನಲ್ಲಿ ಮಹಿಳಾ ಸಾಹಿತಿಗಳ ವಿಚಾರ ಪ್ರಸ್ತಾಪಿಸುವುದಾದಲ್ಲಿ ಕೊಡಗಿನಲ್ಲಿ ಮಹಿಳಾ ಲೇಖಕಿಯರಲ್ಲಿ ಇಪ್ಪತ್ತು ಮಂದಿ ಕೃತಿಕಾರರ ಕೃತಿಗಳಿಗೆ ಗೌರಮ್ಮ ದತ್ತಿ ಪ್ರಶಸ್ತಿ ಲಭಿಸಿರುವುದು ಮಹಿಳಾ ಸಾಹಿತಿಗಳ ಬೆಳವಣಿಗೆಗೆ ಅದ್ಭುತ ಕೊಡುಗೆಯಾಗಿದೆ. ಜಿಲ್ಲೆಯಲ್ಲಿ ಕೃತಿಕಾರರಾಗಿ ಸಾಕಷ್ಟು ಮಹಿಳೆಯರು ತಮ್ಮ ಲೇಖನಗಳ ಮೂಲಕ ಹೊರಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ತಮ್ಮ ತಾಯಿಯವರು ಶಿಕ್ಷಕಿಯಾಗಿ, ಬಹುಭಾಷಾ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘಕಾಲ ದುಡಿದಿದ್ದಾರೆ. ಇವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಕನ್ನಡದ ಆಸಕ್ತಿ ಮೂಡಿದರೆ ಮುಂದಕ್ಕೆ ಅವರುಗಳೆ ಕನ್ನಡದ ಕಟ್ಟಾಳುಗಳಾಗಿ ಭಾಷೆಯನ್ನು ಬೆಳೆಸಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಹಿರಿಯ ಸಾಹಿತಿ ಶೋಭಾ ಸುಬ್ಬಯ್ಯ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ತಾಲೂಕು ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್, ತಾಲೂಕು ಗೌರವ ಕಾರ್ಯದರ್ಶಿ ರಿಶಿತ್ ಮಾದಯ್ಯ, ತಾಲೂಕು ಗೌರವ ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ, ಶಾಲಾ ಮುಖ್ಯಫಪಾಧ್ಯಾಯರಾದ ನೀತಾಕುಮಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹೆಚ್.ಎಸ್.ಹೇಮಾವತಿ, ಕಸಾಪದ ವ್ಯವಸ್ಥಾಪಕಿ ರೇಣುಕಾ ಉಪಸ್ಥಿತರಿದ್ದರು.