ಜಿಲ್ಲೆ

ಸಿಆರ್‌ಎಸ್‌ಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸೋಣ: ವಿವಿಧ ಸಂಘಟನೆಗಳಿಂದ ಮೆಚ್ಚುಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನೂತನ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಂದ ಅಂಕಿತ ಪಡೆದುಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಬೇಕು ಎಂದು ವಿವಿಧ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕದಂಬ ಸೈನ್ಯ, ಭಾರತೀಯ ಕಿಸಾನ್ ಸಂಘ, ಕದಸಂಸ(ಸ್ವಾಭಿಮಾನ ಕೃಷ್ಣಪ್ಪ ಬಣ), ಕರವೇ (ಪ್ರವೀಣ್ ಶೆಟ್ಟಿ ಬಣ)ದ ಪದಾಧಿಕಾರಿಗಳು, ನೂತನ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸಂಬಂದಿಸಿಧಂತೆ ಏಕಾಂಗಿಯಾಗಿ ಪ್ರಬಲ ಹೋರಾಟ ಮಾಡಿ ಉಭಯ ಸದನಗಳಲ್ಲಿ ಕೃಷಿ ವಿಜ್ಞಾನಗಳ(ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು, ವಿಧೇಯಕ ಅನುಮೋದನೆಗೆ ರಾಜ್ಯಪಾಲರ ಭೇಟಿ ಮಾಡಿ ಸಮಗ್ರವಾಗಿ ಚರ್ಚೆ ಮಾಡಿ ಒಪ್ಪಿಗೆ ಪಡೆಯುವಲ್ಲಿ ಚಲುವರಾಯಸ್ವಾಮಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೆ 25 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಆದ್ದರಿಂದ ಪಕ್ಷಾತೀತವಾಗಿ ಪ್ರತಿಯೊಬ್ಬರು ಅಭಿನಂದಿಸಲೇಬೇಕು ಎಂದಿದ್ದಾರೆ.

ನೂತನ ವಿಶ್ವವಿದ್ಯಾಲಯದಿಂದ ಮಂಡ್ಯ,ಹಾಸನ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳ ವ್ಯಾಪ್ತಿಯ ರೈತರಿಗೆ ಸಮಗ್ರ ಕೃಷಿ ಅಭಿವೃದ್ಧಿ ಮಾಡಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಶೀಘ್ರವೇ ಅಭಿನಂದನೆ ಸಲ್ಲಿಸಲಾಗುವುದು. ಮೈಷುಗರ್ ಕಾರ್ಖಾನೆ ಸಂಕಷ್ಟದಲ್ಲಿ ಇರುವಾಗ ಕೃಷಿ ವಿವಿಯನ್ನು ತಂದು ಇತಿಹಾಸ ನಿರ್ಮಿಸಿದ್ದಾರೆ. ಮಾತ್ರವಲ್ಲದೆ ವಿವಿಧ ಜಿಲ್ಲೆಗಳನ್ನು ವಿವಿಗೆ ಸೇರಿಸಲು ಬಾರಿ ಶ್ರಮಪಟ್ಟಿದ್ದಾರೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿರುವ ತಕರಾರು ಅರ್ಜಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಿಆರ್‌ಎಸ್ ಅವರನ್ನು ರಾಜಕಾರಣಿ ಬಿಟ್ಟು ಅಭಿನಂದಿಸಲೇಬೇಕು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ರಾಜಕಾರಣಿಗಳು ಪಕ್ಷಾತೀತವಾಗಿ ಒಂದಾಗಬೇಕು. ಅಂತೆಯೇ ಕೃಷಿ ವಿವಿಯ ವಿಶೇಷಾಧಿಕಾರಿ ಡಾ.ಹರಿಣಿಕುಮಾರ್ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ. ನೂತನ ವಿವಿ ಸ್ಥಾಪನೆಯಿಂದ ಕೃಷಿ ವ್ಯಾಸಂಗ ಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತಾಗಲಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಕೃಷಿ ವಿವಿಯನ್ನು ಪ್ರಾರಂಭಿಸಿ ರೈತರಿಗೆ ಅನುಕೂಲವಾಗುವಂತಹ ಕಾರ್ಯಚಟುವಟಿಕೆ ನಡೆಯಲಿ ಎಂದು ಕದಂಬ ಸೈನ್ಯ ಕನ್ನಡ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘದ ಪ್ರಾಂತೀಯ ಅಧ್ಯಕ್ಷ ಹಾಡ್ಯ ರಮೇಶ್‌ರಾಜು, ಕದಸಂಸ (ಸ್ವಾಭಿಮಾನ ಕೃಷ್ಣಪ್ಪ ಬಣ)ದ ಜಿಲ್ಲಾ ಸಂಚಾಲಕ ಮೋಹನ್ ಚಿಕ್ಕಮಂಡ್ಯ, ಕರವೇ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಡಿ. ಆಶೋಕ್ ಹಾಗೂ ಪದಾಧಿಕಾರಿಗಳು ಸಲಹೆ ನೀಡಿದ್ದಾರೆ.