ಗೋಕರ್ಣ: ಹದಿಮೂರು ಶತಮಾನಗಳ ಹಿಂದೆ ಶ್ರೀಶಂಕರಾಚಾರ್ಯ ಭಗವತ್ಪಾದರು ಸಮಸ್ತ ಶಿಷ್ಯಭಕ್ತ ಸ್ತೋಮ ಧರ್ಮದ ಸನ್ಮಾರ್ಗವನ್ನು ಅನುಸರಿಸಬೇಕು ಎಂಬ ಸದುದ್ದೇಶದಿಂದ ಅಶೋಕೆಯಲ್ಲಿ ಶ್ರೀರಘೂತ್ತಮ ಮಠವನ್ನು (ಇಂದಿನ ಶ್ರೀರಾಮಚಂದ್ರಾಪುರ ಮಠ) ಸ್ಥಾಪಿಸಿದರು. ಇಂತಹ ಮಠ ಈಗ ಸಂಘಟನಾತ್ಮಕವಾದ ಹೊಸ ಆಯಾಮ ಪಡೆಯುತ್ತಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ಮಾಸ್ಯ ಬದ್ಧರಾದ ಶ್ರೀಗಳು ಬುಧವಾರ ನಡೆದ ಸಿದ್ದಾಪುರ, ಬಿದ್ರಕಾನು, ತಾಳಗುಪ್ಪ, ಇಡವಾಣಿ ಮತ್ತು ಭಾನ್ಕುಳಿ ವಲಯಗಳ ಭಿಕ್ಷಾಸೇವೆಯನ್ನು ಸ್ವೀಕರಿಸಿ ಆಶೀರ್ವಚನವಿತ್ತರು.
ಶ್ರೀಶಂಕರಾಚಾರ್ಯರು ಸ್ಥಾಪಿಸಿದ ಮೂಲ ಸ್ಥಾನಕ್ಕೆ ಮಠ ಮರಳಿ ಬಂದಿದೆ. ಇದರ ಜತೆಗೆ ಶ್ರೀಮಠದ ಶಿಷ್ಯ ಸಮೂಹವೂ ಮೂಲವನ್ನು ಸೇರಿದೆ. ಅಂದು ಶಂಕರಾಚಾರ್ಯ ಗುರುವರ್ಯರು ಆಶಿಸಿ, ಆದೇಶಿಸಿದ್ದ ಧರ್ಮದ ಹಾದಿಯ ಮೂಲಕ ನಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಸಂರಕ್ಷಿಸುವ ಮಹಾ ಕಾರ್ಯವನ್ನು ಮಠದ ಅವಿಚ್ಛಿನ್ನ ಪರಂಪರೆಯ 36ಪೀಠಾಧಿಪತಿಗಳು ನಿರಂತರ ಮಾಡುತ್ತ ಬಂದಿದ್ದಾರೆ. ಆದರೆ ಇಂದು ಸಮಾಜದಲ್ಲಿ ಜನ ಸಂಖ್ಯೆ ಕ್ಷೀಣವಾಗುತ್ತಿದೆ. ಸಾಂಪ್ರದಾಯಿಕ ಕೇಂದ್ರಗಳು ದುರ್ಬಲಗೊಳ್ಳುತ್ತಿವೆ. ಯುವಕರು ಉದ್ಯೋಗ ಮತ್ತಿತರ ಕಾರಣಕ್ಕೆ ಗ್ರಾಮಗಳನ್ನು ತೊರೆದು ಪಟ್ಟಣದ ಹಾದಿ ಹಿಡಿದಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಸಂಸ್ಕೃತಿಯ ದೀಪ ಆರದಂತೆ ಕಾಪಾಡಿಕೊಳ್ಳುವುದು ನಮ್ಮ ಮಠದ ಸಮಸ್ತ ಶಿಷ್ಯಭಕ್ತರ ಕರ್ತವ್ಯ. ಇದಕ್ಕಾಗಿ ಸಂಘಟನೆ ಬಲಗೊಳ್ಳುವುದು ಅನಿವಾರ್ಯ. ಇದಕ್ಕಾಗಿ ಪ್ರತಿ ಕಾರ್ಯಕರ್ತರೂ ತಮಗೆ ನಿಯೋಜಿಸಲ್ಪಟ್ಟ ಕಾರ್ಯದಲ್ಲಿ ಸಕ್ರಿಯರಾಗಿ ಕಾರ್ಯತತ್ಪರರಾಗುವಂತೆ ನೋಡಿಕೊಳ್ಳುವಂತಾಗಲಿ ಎಂದು ಶ್ರೀಗಳು ಆಶೀರ್ವಾದ ಅನುಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಜಿ.ಕೆ. ಹೆಗಡೆ ಗೋಳಗೋಡ, ಶ್ರೀಧರ ಆರ್. ಹೆಗಡೆ, ಶ್ರೀಧರ ತಿಮ್ಮಪ್ಪ ಭಟ್ಟ,ಶಂಕರ ವೆಂಕಟ್ರಮಣ ಭಟ್ಟ, ಗಾಯತ್ರಿ ವೆಂಕಟ್ರಮಣ ಭಟ್ಟ, ಮೋಹನ ರಾ.ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಮಗೇಗಾರ ಅವರನ್ನು ಸನ್ಮಾನಿಸಲಾಯಿತು.
ವಿವಿವಿ ಸಮಿತಿ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ ಚಟ್ನಳ್ಳಿ,ಕಾರ್ಯದರ್ಶಿ ಚಂದನ ಶಾಸ್ತ್ರಿ, ಉಪಾಧ್ಯಕ್ಷ ಸತೀಶ ಹೆಗಡೆ ಆಲ್ಮನೆ ಮತ್ತು ಮೋಹನ ಭಟ್ಟ ಹರಿಹರ ಉಪಸ್ಥಿತರಿದ್ದರು.