ಜಿಲ್ಲೆ

ಶ್ರೀ ಶಂಕರಾರ್ಚಾರ ಪ್ರತಿಮೆ ಮೇಲೆ ಬಾವುಟ ಮದ್ಯವ್ಯಸನಿಯ ಕೃತ್ಯ

Chikkamagaluru

ಚಿಕ್ಕಮಗಳೂರು: ಶೃಂಗೇರಿಯಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯ ಮಂಟಪದ ಮೇಲೆ ಅನ್ಯಧರ್ವಿುಯ ಬ್ಯಾನರ್ ಹಾಕಿರುವ ಪ್ರಕರಣ ಯುವಕನೋರ್ವ ಮದ್ಯದ ಅಮಲಿನಲ್ಲಿ ತಿಳಿಯದೆ ಎಸಗಿರುವ ಅಚಾತುರ್ಯ ಎಂದು ಎಸ್ಪಿ ಹಕಾಯ್ ಅಕ್ಷಯ್ ಮಚ್ಚೀಂದ್ರ ಹೇಳಿದರು.

ಕೊಪ್ಪ ತಾಲೂಕಿನ ಬಿಳಗದ್ದೆ ಗ್ರಾಮದ ಮಿಲಿಂದ್ ಎಂಬುವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮುಂದಾಗುವ ಪರಿಣಾಮದ ಅರಿವಿಲ್ಲದೆ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಪೂರ್ವ ನಿಯೋಜಿತವೂ ಅಲ್ಲ. ಇದರ ಹಿಂದೆ ಯಾವುದೇ ಯೋಜನೆ, ಉದ್ದೇಶ, ಸಂಘಟನೆಯ ಪಾತ್ರ ಸಹ ಇಲ್ಲ. ಆದರೆ ಅತ್ಯಂತ ಸೂಕ್ಷ್ಮ ಹಾಗೂ ಉದ್ವಿಗ್ನತೆ ಹೆಚ್ಚಿಸುವ ಸಾಧ್ಯತೆ ಇದ್ದ ಕಾರಣ ಆರೋಪಿ ಪತ್ತೆಗಾಗಿ ಪೊಲೀಸರ ತಂಡ ರಚಿಸಲಾಗಿತ್ತು. ಈ ತಂಡವು ತಕ್ಷಣ ವಿವಿಧೆಡೆ ಅಳವಡಿಸಿದ್ದ ಸಿಸಿ ಕ್ಯಾಮರಾಗಳ ಫೂಟೇಜ್ ಪರಿಶೀಲಿಸಿತ್ತು. ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ 28 ವರ್ಷದ ಮಿಲಿಂದ್ ಎಂಬ ಪಾನಮತ್ತ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆಂದು ಅಂತಿಮವಾಗಿ ಪತ್ತೆಯಾಗಿದೆ ಎಂದರು.

ಚಿಕ್ಕಮಗಳೂರು ಡಿವೈಎಸ್ಪಿ ಬಸಪ್ಪ ಅಂಗಡಿ, ಕೊಪ್ಪ ಡಿವೈಎಸ್ಪಿ ಎಸ್.ರಾಜು, ಶೃಂಗೇರಿ ಠಾಣೆ ಇನ್ಸ್​ಪೆಕ್ಟರ್ ಪಿ.ಎಂ.ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿದ್ದರು.