ಸರಗೂರು: ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳಿಂದ ಕೈಗೊಂಡಿರುವ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗಿದೆ ಎಂದು ಮುಳ್ಳೂರು ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ ತಿಳಿಸಿದರು.
ತಾಲೂಕಿನ ಮುಳ್ಳೂರು ವಲಯದ ಕಾರ್ಯಕ್ಷೇತ್ರದ ಕೂಡಿಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಿಡುವಳಿ ಯೋಜನೆ ಮತ್ತು ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೊಂದವರಿಗೆ ಆಸರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಕುಟುಂಬದ ಅಭಿವೃದ್ಧಿಗೆ ಕೆಲಸಗಳ ಪಟ್ಟಿ, ಹಿಡುವಳಿ ಕೈಪಿಡಿ ದಾಖಲಿಸಿ ತಮ್ಮ ದುಡಿಮೆಗೆ ಸಂಘದಿಂದ ಸಿಗುವ ಸೌಲಭ್ಯ, ಪ್ರಗತಿನಿಧಿಯ ಮೂಲಕ ಹಿಡುವಳಿ ಮತ್ತು ವಾರ್ಷಿಕ ಯೋಜನೆ ಗುರಿ ಸಾಧನೆಗೆ ವಿಶೇಷ ಗಮನ ನೀಡಿ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷೆ ಲಕ್ಷ್ಮೀಬಾಯಿ, ಸೇವಾ ಪ್ರತಿನಿಧಿಗಳಾದ ಶಿಲ್ಪಾ, ಚಿಕ್ಕಪುಟ್ಟಯ್ಯ, ಅಂಗನವಾಡಿ ಕಾರ್ಯಕರ್ತೆ ಜಯಶೀಲಾ, ಗುಂಪಿನ ಸದಸ್ಯರು ಉಪಸ್ಥಿತರಿದ್ದರು.