ವಿಜಯಪುರ: ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬಿದ ಹಿನ್ನೆಲೆ ಕಾಂಗ್ರೆಸ್‌ನಿಂದ 1 ವರ್ಷ ಕಾಲ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ತನ್ನಿಮಿತ್ತ ಪ್ರಪ್ರಥಮ ಬಾರಿಗೆ ಸೇವಾದಳ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆದೇಶದಂತೆ ರಾಜ್ಯದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗಿದ್ದು, ಇದೀಗ ವಿಜಯಪುರದಿಂದಲೇ ಆರಂಭಗೊಳ್ಳುತ್ತಿರುವ ಸೇವಾದಳ ತರಬೇತಿ ಶಿಬಿರ ಹಂತ ಹಂತವಾಗಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಸೇವಾದಳದ ಅಧ್ಯಕ್ಷ ರಾಮಚಂದ್ರಪ್ಪನವರ ಆದೇಶದಂತೆ ವಿಜಯಪುರದಲ್ಲಿ ನ.29, 30 ಹಾಗೂ ಡಿ.1ರಂದು ಶಿಬಿರ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಗರದ ಜ್ಞಾನಜ್ಯೋತಿ ವಸತಿ ಶಾಲೆ ಆವರಣದಲ್ಲಿ ಈ ಶಿಬಿರ ನಡೆಯಲಿದ್ದು, ಜಿಲ್ಲೆಯ 16 ಬ್ಲಾಕ್ ಕಾಂಗ್ರೆಸ್‌ನ ಎಲ್ಲ ಸೇವಾದಳದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮಹಿಳೆಯರು ಹಾಗೂ ಪುರುಷರು ಸೇರಿ ಅಂದಾಜು 500 ಜನರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಿಂದ ಬಿ.ಕೆ. ಹರಿಪ್ರಸಾದ, ಸಚಿವ ಸತೀಶ ಜಾರಕಿಹೊಳಿ, ಸಚಿವ ಆರ್.ಬಿ. ತಿಮ್ಮಾಪುರ ಸೇರಿದಂತೆ ಸುಮಾರು 15 ಪ್ರಮುಖ ನಾಯಕರು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯಲ್ಲಿ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದರು.
ಸೇವಾದಳದ ರಾಜ್ಯ ಪ್ರತಿನಿಧಿ ರಮೇಶ ಮಾತನಾಡಿ, ಸೇವಾದಳ ತರಬೇತಿ ಶಿಬಿರ ಆಯೋಜನೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಅಚ್ಚುಕಟ್ಟಾಗಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಕಾಂಗ್ರೆಸ್ ನಡೆದು ಬಂದ ಹಾದಿ ಕುರಿತು ತಿಳಿಸಿಕೊಡಲಾಗುವುದು. ಅಲ್ಲದೇ, ರಾಷ್ಟ್ರಾಭಿಮಾನ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಶಿಸ್ತು, ಸಂಯಮ ಮತ್ತು ಸ್ವಚ್ಛತೆ ಸೇರಿದಂತೆ ರಾಷ್ಟ್ರಾಭಿಮಾನ ಕುರಿತು ಜಾಗೃತಿ ಮೂಡಿಸಲಾಗುವುದು. ಬೆಳಗ್ಗೆ 5ರಿಂದ ಆರಂಭಗೊಳ್ಳುವ ಶಿಬಿರ ರಾತ್ರಿ 10ಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.
ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಡಾ.ಗಂಗಾಧರ ಸಂಬಣ್ಣಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.