ಕಡೂರು: ಪಕ್ಷದಿಂದ ಲಾಭ ಪಡೆದ ಪ್ರತಿಯೊಬ್ಬ ಮುಖಂಡರೂ ಪಕ್ಷದ ಋಣ ತೀರಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.
ದೊಡ್ಡಪೇಟೆಯ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ನಿಂದ ಸೋಮವಾರ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಘಟನೆಯಲ್ಲಿ ಭಾಗಿಯಾಗುವ ಮೂಲಕ ಪಕ್ಷದಿಂದ ಲಾಭ ಪಡೆದವರು ಋಣಮುಕ್ತರಾಗಬೇಕಿದೆ. ದೇಶದಲ್ಲಿ ಪ್ರಾಮಾಣಿಕ ಮತದಾರರ ಜತೆಗೆ ಪ್ರಾಮಾಣಿಕ ರಾಜಕಾರಣಿಗಳು ಇದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 125 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ. ಹೊಸ ರೀತಿಯಲ್ಲಿ ಪಕ್ಷ ಸಂಘಟನೆಯಾಗುತ್ತಿದ್ದು, ವರ್ಷದ ಮೊದಲೇ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯ ನಡೆಯಲಿದೆ ಎಂದರು.
ಜನಸಾಮಾನ್ಯರು ರಾಜಕಾರಣ ಮಾಡುವ ಕಾಲ ಬರಬೇಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿರುವ ಎಲ್ಲ ಕೈಗಾರಿಕೆಗಳನ್ನು ಬಿಜೆಪಿ ಸರ್ಕಾರ ಮುಚ್ಚಿಸಲು ಮುಂದಾಗಿದೆ. ಜಿಪಂ ಹಾಗೂ ತಾಪಂ ಚುನಾವಣೆಗೆ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದರು.