ಹನೂರು: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಘಟನೆ ಅವಶ್ಯಕ ಎಂದು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ ತಿಳಿಸಿದರು.
ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸೋಮವಾರ ಸರ್ಕಲ್ ಸೋಲಿಗ ಸಂಘದಿಂದ ಅಧ್ಯಕ್ಷ ದೊಡ್ಡಸಿದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸೋಲಿಗ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿಯೇ ಹನೂರು ತಾಲೂಕಿನಲ್ಲಿ ಹೆಚ್ಚಿನ ಗಿರಿಜನರು ವಾಸಿಸುತ್ತಿದ್ದಾರೆ. ಆದರೆ ಹಾಡಿಗಳಿಗೆ ಸಮರ್ಪಕ ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ಇತರ ಅಗತ್ಯ ಮೂಲ ಸೌಕರ್ಯ ಒದಗಿಸಿ ಕೊಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದರಿಂದ ಸೋಲಿಗರು ಕಷ್ಟದ ನಡುವೆ ಜೀವನ ನಡೆಸಬೇಕಾದ ಸ್ಥಿತಿ ಇದೆ. ಇನ್ನು ಅರಣ್ಯ ಹಕ್ಕು ಕಾಯ್ದೆಯಡಿ ಜಮೀನನ್ನು ಪಡೆದಿರುವವರಿಗೆ ಹಕ್ಕುಪತ್ರ ನೀಡಿಲ್ಲ. ಪರಿಣಾಮ ಸರ್ಕಾರದಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಅಗತ್ಯ ಸೌಕರ್ಯ ಪಡೆದುಕೊಳ್ಳಲು ಮುಂದಾಗಬೇಕಿದೆ. ಅಲ್ಲದೆ ಸಭೆ ನಡೆಸಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಸಂಘಟಿತರಾಗಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಕೆ. ರಂಗೇಗೌಡ, ಚಂದ್ರು, ಚನ್ನರಂಗೇಗೌಡ ಆಲುಮಲೆ, ಮಾದಮ್ಮ, ಜಯಮ್ಮ, ದೊಡ್ಡಸಿದ್ದಮ್ಮ ಇತರರು ಇದ್ದರು.