ಹುನಗುಂದ ಪಟ್ಟಣದ ಬಸವ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುನಗುಂದ ಮತ್ತು ಇಳಕಲ್ಲ ತಾಲೂಕಿನ ಪ್ಯಾರಾಮಿಲಿಟರಿ ವೆಲ್​ಫೇರ್​ ಅಸೋಸಿಯೇಷನ್‌ನ್ನು ಭೀಮನಗಡದ ಕಲ್ಲಿನಾಥ ಮಹಾಸ್ವಾಮೀಜಿಗಳು ಉದ್ಘಾಟಿಸಿದರು. ಎಂ.ಪಿ.ಎನ್. ರೆಡ್ಡಿ, ವಿಜಯ ಮಹಾಂತೇಶ ಗದ್ದನಕೇರಿ, ಶಿವರಾಂ, ಕೃಷ್ಣಪ್ಪ ಎಚ್., ಶಬ್ಬೀರ್ ಪಟೇಲ್, ರಾಯಪ್ಪ ಹಾದಿಮನಿ ಮತ್ತಿತರರಿದ್ದರು. 
ಜಿಲ್ಲೆ

ಹಕ್ಕುಗಳ ಮರುಸ್ಥಾಪನೆಗೆ ಸಂಘಟನೆ ಅವಶ್ಯ

ಹುನಗುಂದ: ಅರೆಸೇನಾ ಪಡೆಯ ನಿವೃತ್ತ ಯೋಧರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಮತ್ತು ತಮ್ಮ ಹಕ್ಕುಗಳ ಮರುಸ್ಥಾಪನೆಗೆ ತಾಲೂಕು, ಜಿಲ್ಲಾ ಹಂತದಲ್ಲಿ ಸಂಘಟನೆ ರಚಿಸುವ ಅವಶ್ಯಕತೆ ಇದೆ ಎಂದು ಪ್ಯಾರಾಮಿಲಿಟರಿ ವೆಲ್​ಫೇರ್​ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಂ.ಪಿ.ಎನ್. ರೆಡ್ಡಿ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಸಂಸ್ಥಾನಮಠದ ಬಸವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಹುನಗುಂದ ಮತ್ತು ಇಳಕಲ್ಲ ತಾಲೂಕಿನ ಪ್ಯಾರಾಮಿಲಿಟರಿ ವೆಲ್​ಫೇರ್​ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ಯಾರಾಮಿಲಿಟರಿ ವೆಲ್​ಫೇರ್​ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ಗೋಪಾಲ ಮಾತನಾಡಿ, ಭಾರತೀಯ ಸೇನೆಯ ಹೆಗಲಿಗೆ ಹೆಗಲು ಕೊಟ್ಟು ಯುದ್ಧ ಹಾಗೂ ಶಾಂತಿ ಕಾಲದಲ್ಲಿ ಸೇವೆ ಸಲ್ಲಿಸುವ ಅರೆಸೇನಾ ಪಡೆಯ ನಿವೃತ್ತ ಯೋಧರಿಗೆ ನಿವೃತ್ತಿ ನಂತರ ಸೂಕ್ತ ಸೌಲಭ್ಯ ದೊರಕುತ್ತಿಲ್ಲ. ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ನೀಡುವ ಸೌಲಭ್ಯಕ್ಕೂ ಅರೆಸೇನಾ ಪಡೆಗಳ ನಿವೃತ್ತ ಯೋಧರಿಗೆ ಒದಗಿಸುವ ಸೌಲಭ್ಯ ಹಾಗೂ ಉದ್ಯೋಗ ಸಂಬಂಧಿತ ಅನುಕೂಲಗಳಲ್ಲಿ ತಾರತಮ್ಯವಿದ್ದು, ರಿಪಡಿಸುವ ಕಾರ್ಯವಾಗಬೇಕಿದೆ ಎಂದರು.

ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ತಮ್ಮ ಜೀವನವನ್ನು ದೇಶ ರಕ್ಷಣೆಗೆ ಮೀಸಲಿಟ್ಟ ಅರೆಸೇನಾ ಪಡೆಯ ನಿವೃತ್ತ ಸೈನಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಸರ್ಕಾರಕ್ಕೆ ಭೂಷಣವಲ್ಲ. ಮಾಜಿ ಯೋಧರ ನ್ಯಾಯಸಮ್ಮತ ಬೇಡಿಕೆ ಈಡೇರಿಸುವ ಕುರಿತು ಸದನದಲ್ಲಿ ಪ್ರಸ್ತಾಪಿಸುವುದಾಗಿ ಸ್ಥಳೀಯ ಶಾಸಕ ವಿಜಯಾನಂದ ಕಾಶಪ್ಪನವರ ಸಂದೇಶದ ಮೂಲಕ ತಿಳಿಸಿದ್ದಾರೆ ಎಂದರು.

ಗೌರವಾಧ್ಯಕ್ಷ ಶಿವರಾಂ, ಕೃಷ್ಣಪ್ಪ ಎಚ್., ಶಬ್ಬೀರ್ ಪಟೇಲ್, ರಾಯಪ್ಪ ಹಾದಿಮನಿ ಹಾಗೂ ಸಾನ್ನಿಧ್ಯ ವಹಿಸಿದ್ದ ಕಲ್ಲಿನಾಥ ಮಹಾಸ್ವಾಮಿಗಳು ಮಾತನಾಡಿದರು.

ಸಂಘದ ತಾಲೂಕು ಅಧ್ಯಕ್ಷ ಪ್ರಭುಲಿಂಗಯ್ಯ ಕಾಳಹಸ್ತಿಮಠ, ಉಪಾಧ್ಯಕ್ಷ ಹೈದರಸಾಬ ಹಳ್ಳಿ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಉಮಚಗಿ, ಹಜರ್‌ಸಾಬ ಪಿಂಜಾರ, ಸೈಯದ್ ಸಾಬ, ಸತ್ಯಪ್ಪ ಕಟಗೂರ ಮತ್ತಿತರರಿದ್ದರು.