ವಿಜಯವಾಣಿ ಸುದ್ದಿಜಾಲ ಧಾರವಾಡ
ನೈಸರ್ಗಿಕ ಕೃಷಿಯಲ್ಲಿ ಬೆಳೆದ ಸಿರಿಧಾನ್ಯಗಳ ಸಾವಯವ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಅಧಿಕಗೊಳ್ಳುತ್ತದೆ ಎಂದು ವೈಶುದೀಪ ಫೌಂಡೇಷನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹೇಳಿದರು.
ಸಿರಿ ಧಾನ್ಯಗಳ ವರ್ಷ-2023ರ ನಿಮಿತ್ತ ನಗರದ ಕಾಮನಕಟ್ಟಿ ಬಳಿಯ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಮಂಗಳವಾರ ಏರ್ಪಡಿಸಿದ್ದ ಆಹಾರ ಮೇಳ (ಫುಡ್-ಫೆಸ್ಟ್) ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯವೂ ಸಿರಿಧಾನ್ಯಗಳ ಆಹಾರ ಪದ್ಧತಿ ಅನುಸರಿಸುವುದು ಅತ್ಯಂತ ಉತ್ಕೃಷ್ಟವಾಗಿದ್ದು, ಸಿರಿಧಾನ್ಯಗಳು ದೇಹದ ಆರೋಗ್ಯ ರಕ್ಷಣೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತವೆ. ವಿದ್ಯಾರ್ಥಿಗಳ ಪಾಲಕರು ಮಕ್ಕಳಿಗೆ ಹೆಚ್ಚೆಚ್ಚು ಸಾವಯವ ಕೃಷಿಯ ಸಿರಿಧಾನ್ಯಗಳ ಆಹಾರ ಸೇವನೆಯನ್ನೇ ರೂಢಿಸಬೇಕು ಎಂದರು.
ರಾಸಾಯನಿಕ ಗೊಬ್ಬರಗಳ ಬಳಕೆ ಕೈಬಿಟ್ಟು ಜಾನುವಾರುಗಳ ಸಗಣಿ ಗೊಬ್ಬರವನ್ನೇ ಹೊಲಗಳಿಗೆ ಹಾಕುವ ಪರಿಪಾಠ ರೈತರಲ್ಲಿ ಮೂಡಬೇಕಾಗಿದೆ. ಇದರಿಂದ ಭೂಮಿಯ ತಾಕತ್ತು ಹೆಚ್ಚುತ್ತದೆ. ನಮ್ಮ ರೈತಬಾಂಧವರು ಕೇವಲ ಆರ್ಥಿಕ ಬೆಳೆಗಳನ್ನು ಬೆಳೆಯದೆ ಆಹಾರ ಧಾನ್ಯಗಳ ಅಧಿಕ ಇಳುವರಿಗೂ ಗಮನ ನೀಡಬೇಕಿದೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ಮಾತನಾಡಿ, ಭಾರತೀಯ ಕೃಷಿ ಪದ್ಧತಿಯ ತಾಯಿ ಬೇರಿನಂತಿರುವ ನೈಸರ್ಗಿಕ ಸಾವಯವ ಕೃಷಿ ಪದ್ಧತಿಯನ್ನು ಮತ್ತೆ ಎಲ್ಲರೂ ಸೇರಿ ನಮ್ಮ ರಾಷ್ಟ್ರದ ನೆಲದ ಮಣ್ಣಿನಲ್ಲಿ ಉಳಿಸಬೇಕಾಗಿದೆ. ಕೃಷಿ ಪ್ರಧಾನ ದೇಶವಾದ ಭಾರತವು ಆಹಾರ ಸ್ವಾವಲಂಬನೆ ಸಾಧಿಸುವಲ್ಲಿ ಗಂಭೀರ ಚಿಂತನೆ ಅಗತ್ಯ ಎಂದರು.
ಸುಜಾತಾ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ಶಂಭುಗೌಡ ಸಾಲಮನಿ, ದೀಪಾ ನೀರಲಕಟ್ಟಿ, ಗ್ರೀನ ಆರ್ಮಿಯ ಪ್ರಕಾಶ ಗೌಡರ, ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪುರ, ವಿದ್ಯಾರ್ಥಿಗಳು, ಇತರರು ಇದ್ದರು.