ಜಿಲ್ಲೆ

ನಾಲ್ವರು ರೋಗಿಗಳಿಗೆ ಜೀವದಾನ ಮಾಡಿದ ಯುವಕ - ಮೆಟ್ರೋ ಮೂಲಕ ಅಂಗಾಂಗ ರವಾನೆ

ಬೆಂಗಳೂರು:  ಮಿದುಳು ನಿಷ್ಕ್ರಿಯವಾಗಿದ್ದ 33 ವರ್ಷದ ಯುವಕನಿಂದ ಪಡೆದ ಅಂಗಾಂಗವನ್ನು ನಮ್ಮ ಮೆಟ್ರೋ ರೈಲಿನಲ್ಲಿ ಗುರುವಾರ ಬೆಳಗ್ಗೆ ರವಾನಿಸುವ ಮೂಲಕ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಲ್ವರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಶಸಚಿಕಿತ್ಸೆ ನಡೆಸಲಾಗಿದೆ.

ದಾನಿಯು ನಗರದ ಮತ್ತಿಕೆರೆ ನಿವಾಸಿಯಾಗದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಒತ್ತಡದಿಂದ ಅವರಿಗೆ ಮೂರು ದಿನಗಳ ಹಿಂದೆ ತಲೆನೋವು ಕಾಣಿಸಿಕೊಂಡಿತ್ತು. ಸ್ನಾನ ಮುಗಿಸಿ ಹೊರಬಂದರವರೇ ತಲೆಸುತ್ತಿ ಬಿದ್ದಿದ್ದರು. ಸ್ಥಳೀಯ ಆಸ್ಪತ್ರೆ, ಅಲ್ಲಿಂದ ನಿಮ್ಹಾನ್ಸ್ ಸೇರಿ ಕೆಲಸ ಆಸ್ಪತ್ರೆಗಳಿಗೆ ಹೋಗಿ ಕೊನೆಗೆ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಿದುಳು ನಿಷ್ಕ್ರಿಯೆಗೊಂಡಿದ್ದಾಗಿ ವೈದ್ಯರು ದೃಢಪಡಿಸಿದ ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿಸಿದರು ಎಂದು ಜೀವಸಾರ್ಥಕತೆ ಯೋಜನೆ ಸಿಬ್ಬಂದಿ ತಿಳಿಸಿದ್ದಾರೆ.

61 ನಿಮಿಷಗಳಲ್ಲಿ ರವಾನೆ:

ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾನಿಯಿಂದ ಪಡೆದ ಅಂಗಾಂಗಗಳ ಪೈಕಿ ಶ್ವಾಸಕೋಶವನ್ನು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ, ಆರ್.ವಿ. ರಸ್ತೆಯ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ಹಳದಿ ಮಾರ್ಗವಾಗಿ ಬೊಮ್ಮಸಂದ್ರ ನಿಲ್ದಾಣಕ್ಕೆ 61 ನಿಮಿಷಗಳಲ್ಲಿ (30-33 ಕಿ.ಮೀ.) ನಾರಾಯಣ ಹೆಲ್ತ್ ಆಸ್ಪತ್ರೆಗೆ ತಲುಪಿಸಲಾಯಿತು. ಇದೇ ರೀತಿ, ಜೆ.ಪಿ.ನಗರದ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಹೃದಯವನ್ನು ಸಹ ಮೆಟ್ರೋ ಮೂಲಕ ರವಾನಿಸಲಾಯಿತು. ಉಳಿದಂತೆ ಯಶವಂತಪುರ ಸ್ಪರ್ಶ್ ಆಸ್ಪತ್ರೆಗೆ ಒಂದು ಕಿಡ್ನಿ, ವಿಕ್ಟೋರಿಯಾ ಆವರಣದಲ್ಲಿನ ನೆ್ರೆೆ ಯುರಾಲಜಿ ಸಂಸ್ಥೆಗೆ ಮತ್ತೊಂದು ಕಿಡ್ನಿ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಗೆ ಎರಡು ಕಾರ್ನಿಯಾವನ್ನು ರಸ್ತೆ ಮೂಲಕ ರವಾನಿಸಿ, ಅಗತ್ಯವಿದ್ದ ರೋಗಿಗಳಿಗೆ ಕಸಿ ಶಸಚಿಕಿತ್ಸೆ ನಡೆಸಲಾಯಿತು.

ಸಂಚಾರ ಸಿಕ್ಕಿನ ಸಮಯದಲ್ಲಿ ದಾನಿಯ ಪ್ರಮುಖ ಅಂಗವನ್ನು ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲು ಸಹಕರಿಸಿದ ಬೆಂಗಳೂರು ಮೆಟ್ರೋ ನಿಗಮದ ಸಹಕಾರಕ್ಕೆ ನಾರಾಯಣ ಹೆಲ್ತ್ ಆಸ್ಪತ್ರೆಯು ಧನ್ಯವಾದ ತಿಳಿಸಿದೆ.

ಮೂರನೇ ಪ್ರಕರಣ

ದಾನಿಯ ಅಂಗಾಂಗವನ್ನು ಈ ರೀತಿ ಮೆಟ್ರೋ ಮೂಲಕ ಸಾಗಿಸಿರುವುದು ಕಳೆದ ಮೂರು ತಿಂಗಳಲ್ಲಿ ಇದು 3ನೇ ಪ್ರಕರಣವಾಗಿದೆ. ಆ. 2ರಂದು ಮೊದಲ ಬಾರಿಗೆ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಯಿಂದ ಆರ್.ಆರ್. ನಗರದ ಸ್ಪರ್ಶ್ ಆಸ್ಪತ್ರೆಗೆ ಅಂಗಾಂಗ ರವಾನಿಸಲಾಗಿತ್ತು. ಸೆ. 12ರಂದು ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಗೆ ಮೆಟ್ರೋ ಮೂಲಕ ಅಂಗಾಂಗ ಸಾಗಿಸಲಾಗಿತ್ತು.

ಸಾರ್ವಜನಿಕರಿಂದ ಮೆಚ್ಚುಗೆ

ಅತಿಯಾದ ಸಂಚಾರ ಸಿಕ್ಕಿನಿಂದಾಗಿ ನಗರದಲ್ಲಿ ವಾಹನ ಸಂಚಾರ ಬಹಳ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಪಘಾತ, ಹೃದಯಾಘಾತ ಸೇರಿ ಆರೋಗ್ಯ ಸಮಸ್ಯೆಗಳಿಗೆ ಒಳಗಾದವರು ತುರ್ತು ಚಿಕಿತ್ಸೆ ಆಸ್ಪತ್ರೆಗೆ ತಲುಪುವುದು ಸವಾಲಾಗಿ ಪರಿಣಮಿಸಿದೆ. ಹೀಗಿರುವಾಗ ದಾನಿಯ ಅಂಗಾಂಗ ನಿಗದಿತ ಸಮಯದಲ್ಲಿ ನಿರ್ದಿಷ್ಟ ಸ್ಥಳಕ್ಕೆ ರವಾನಿಸುವುದು ಸವಾಲೇ ಸರಿ. ಇಂತಹ ಸಂದರ್ಭದಲ್ಲಿ ಅಂಗಾಂಗ ಸಾಗಿಸಲು ಮೆಟ್ರೋ ವರದಾನವಾಗಿ ಪರಿಣಮಿಸಿದೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.