ಜಿಲ್ಲೆ

ಹಸಿರು ಪಥದಲ್ಲಿ ಮಣಿಪಾಲದಿಂದ ಚೆನ್ನೈಗೆ ಅಂಗಾಂಗ ರವಾನೆ

Dakshina Kannada

ಉಡುಪಿ: ದಾವಣಗೆರೆಯಲ್ಲಿ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ ಮಾಡಲಾಗಿದ್ದು, ಒಂದು ಮೂತ್ರಪಿಂಡ ಮಂಗಳೂರಿನ ಯೇಪೋಯ ಆಸ್ಪತ್ರೆಗೆ, ಹೃದಯ ಕವಾಟವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆ ರೋಗಿಗೆ ಹಸಿರು ಪಥದಲ್ಲಿ (ಗ್ರೀನ್ ಕಾರಿಡಾರ್) ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚೆನ್ನೈ ಗೆ ರವಾನಿಸಲಾಗಿದೆ.

ಜ.22ರಂದು ದಾವಣಗೆರೆ ಬಳಿ ಗುಡಾಲು ಗ್ರಾಮದ ಗುಮ್ಮನೂರು ರಸ್ತೆಯಲ್ಲಿ ಅಪಘಾತದಿಂದ ಗಾಯಗೊಂಡಿದ್ದ ಇಂದ್ರಮ್ಮ ಬಿ.ಎಂ. (57) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜ.23ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪರಿಶ್ರಮದ ಬಳಿಕವೂ ಗಾಯಾಳು ಚೇತರಿಸಿಕೊಳ್ಳಲಿಲ್ಲ. ಇಂದ್ರಮ್ಮ ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ವೈದ್ಯರು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು. ನಂತರ ಪತಿ ನಂಜುಂಡಪ್ಪ ಎಚ್.ಎನ್. ಅಂಗಾಂಗ ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದರು.

ಹೀಗಾಗಿ ಇಂದ್ರಮ್ಮ ಅವರ ಹೃದಯ ಕವಾಟ, ಯಕೃತ್ತು, ಎರಡು ಮೂತ್ರಪಿಂಡ ಮತ್ತು ಎರಡು ಕಾರ್ನಿಯಾಗಳನ್ನು ತೆಗೆದು 6 ಜನರ ಜೀವ ಉಳಿಸಲು ಸಹಾಯ ಮಾಡಲಾಗಿದೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾ ಮತ್ತು ಒಂದು ಮೂತ್ರಪಿಂಡವನ್ನು ಬಳಸಲಾಯಿತು. ಉಳಿದ ಅಂಗಗಳನ್ನು ಮಂಗಳೂರು ಮತ್ತು ಚೆನ್ನೈಗೆ ಕಳುಹಿಸಿಕೊಡಲಾಗಿದೆ.

ಮೃತ ಇಂದ್ರಮ್ಮ ಪತಿ ನಂಜುಂಡಪ್ಪ ಪ್ರತಿಕ್ರಿಯಿಸಿ, ಅಂಗದಾನ ಒಂದು ಪುಣ್ಯದ ಕೆಲಸ. ಪತ್ನಿ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಠ ಕಾರ್ಯ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.