ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್  
ಜಿಲ್ಲೆ

ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣಕ್ಕೆ ಸುಗ್ರೀವಾಜ್ಞೆ

ನವೀನ ಬಿ.ಎಂ

ಶಿವಮೊಗ್ಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ನಿಶ್ಚಿತವಾಗಿ ಹೊರಡಿಸಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಹ ಭಾಗಿಯಾಗಬೇಕು. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಗಲೂ ಸಹ ಐಎಂಎ ಹಗರಣ ಆಗಿತ್ತು. ಈಗ ಮೈಕ್ರೋ ಫೈನಾನ್ಸ್ ಹಾವಳಿ ಎಲ್ಲ ಕಡೆ ಇದ್ದು ಅದು ನಿರಂತರವಾಗಿ ನಡೆದುಕೊಂಡು ಬಂದಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ ಎಂದರು.

ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ತರಬೇಕಿದೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಬೇಕಿದೆ. ದುಬಾರಿ ಬಡ್ಡಿಯಿಂದ ಜನರು ಅವಮಾನ ಸಹಿಸದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಆಗಬಾರದು. ಅದಕ್ಕಾಗಿ ಆರ್‌ಬಿಐ ಸಹ ಸಹಮತ ವ್ಯಕ್ತಪಡಿಸಬೇಕು ಎಂದರು.

ಕೇಂದ್ರ ಸರ್ಕಾರ ಸಹ ಸೂಕ್ತ ಕಾನೂನು ತರಬೇಕು. ಮೈಕ್ರೋ ಫೈನಾನ್ಸ್‌ನ ಹಾವಳಿಗೆ ಇತಿಶ್ರೀ ಹಾಡಬೇಕು. ಫೈನಾನ್ಸ್ ಹಾವಳಿಯಿಂದ ನೊಂದವರಿಗೆ ನಮ್ಮ ಸರ್ಕಾರ ನಿಶ್ವಿತವಾಗಿ ನೆರವು ನೀಡಲಿದೆ. ಯಾವುದೇ ಶೋಷಣೆ ಇಲ್ಲದಂತಹ ಕಠಿಣ ಕಾನೂನು ಬರಬೇಕು ಎಂದು ಹೇಳಿದರು.