ನರಗುಂದ: ಪಟ್ಟಣದ ತೋಟದ ಕೆರೆ ಬದುವಿನಲ್ಲಿ ಹಲವಾರು ವರ್ಷಗಳಿಂದ ತಾತ್ಕಾಲಿಕವಾಗಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ನಿವಾಸಿಗಳಿಗೆ ಆಗಸ್ಟ್ 14ರ ಒಳಗಾಗಿ ಮನೆ ತೆರವು ಮಾಡಲು ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಮನೆ ತೆರವು ಮಾಡುವಂತೆ ಈ ಮೊದಲು ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ, ಏಕಾಏಕಿ ಮನೆ ತೆರವುಗೊಳಿಸಿದರೆ ಕಷ್ಟವಾಗುತ್ತದೆ. ಹೀಗಾಗಿ ಕೆಲ ದಿನಗಳ ಕಾಲಾವಕಾಶ ನೀಡುವಂತೆ ನಿವಾಸಿಗಳು ಮನವಿ ಮಾಡಿದ್ದರಿಂದ ನ್ಯಾಯಾಲಯ ಅವರ ಮನವಿ ಪುರಸ್ಕರಿಸಿ ಆ. 14ರ ಗಡುವು ನೀಡಿದೆ.
40 ವರ್ಷಗಳಿಂದ ಕೆರೆ ದಂಡೆಯಲ್ಲಿ ವಾಸಿಸುತ್ತಿರುವ 57 ಕುಟುಂಬಗಳ ಪೈಕಿ ಈಗಾಗಲೇ 19 ಜನರಿಗೆ ಪಟ್ಟಣದ ಹೊರವಲಯದಲ್ಲಿರುವ ವಾಜಪೇಯಿ ನಿವಾಸ ಬಡಾವಣೆಯಲ್ಲಿ ಮನೆಗಳನ್ನು ನೀಡಲಾಗಿದೆ. ಉಳಿದಿರುವ 38 ಮನೆಗಳ ನಿವಾಸಿಗಳಿಗೆ ನಗರದ ಗುಡ್ಡದ ಬದಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳನ್ನು ನೀಡಲು ಪುರಸಭೆಯಲ್ಲಿ ಈಚೆಗೆ ನಡೆದ ವಸತಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಮೀತ್ ತಾರದಾಳೆ ತಿಳಿಸಿದ್ದಾರೆ.