ಮಂಡ್ಯ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಗೈರಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಅವರು, ಅಧಿಕಾರಿ ಮತ್ತು ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಪ್ರತಿ ವಾರ ಆಯಾ ತಾಪಂ ಇಒಗಳು ಹಾಜರಾತಿ ಹಾಗೂ ಚಲನ ವಲನ ರಿಜಿಸ್ಟರ್‌ನಲ್ಲಿ ವಿವರ ಪಡೆದು ಪರಿಶೀಲಿಸಬೇಕು. ಗೈರು ಹಾಜರಿ ಕಂಡು ಬಂದಲ್ಲಿ ವಿವರ ಪಡೆದುಕೊಳ್ಳಬೇಕು. ಪ್ರತಿ 15 ದಿನಕೊಮ್ಮೆ ವಿವರವನ್ನು ಜಿಪಂಗೆ ಸಲ್ಲಿಸಬೇಕು. ಒಂದು ವೇಳೆ ಎರಡಕ್ಕಿಂತ ಹೆಚ್ಚು ಬಾರಿ ಹಾಜರಾತಿ ಕೊರತೆ ಕಂಡುಬಂದಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವಂತೆ ತಾಪಂ ಇಒಗೆ ಸೂಚನೆ ನೀಡಿದ್ದಾರೆ.
ತಾಪಂ, ಗ್ರಾಪಂ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿ ನಿಯಮ ಪಾಲಿಸದೇ ಇರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರು ಸ್ವೀಕೃತವಾಗುತ್ತಿದೆ. ಆದ್ದರಿಂದ ಶಿಸ್ತುಬದ್ಧವಾಗಿ ಕಚೇರಿ ನಿಯಮ ಪಾಲಿಸಬೇಕು. ಕಚೇರಿ ಪ್ರಾರಂಭದ ಸಮಯ ಬೆಳಗ್ಗೆ 10ಗಂಟೆಗೆ ಕಚೇರಿಗೆ ಹಾಜರಾಗಿ ಬಯೋಮೆಟ್ರಿಕ್ ದಾಖಲಿಸಬೇಕು. ಮಾತ್ರವಲ್ಲದೆ ಎಲ್ಲರೂ ಗುರುತಿನ ಚೀಟಿಯನ್ನು ಧರಿಸುವುದು ಕಡ್ಡಾಯ. ಮೇಲಧಿಕಾರಿಗಳು ಆಯೋಜಿಸಿರುವ ಸಭೆಗೆ ಹಾಜರಾಗಬೇಕಾದರೆ ಹಾಗೂ ಅನ್ಯಕಾರ್ಯ, ಸ್ಥಳ ಭೇಟಿ ನೀಡುವ ವೇಳೆ ಚಲನ-ವಲನ ವಹಿಯಲ್ಲಿ ಸಕಾರಣವನ್ನು ವಿವರವಾಗಿ ನಮೂದಿಸಿ. ಸಂಬಂಧಪಟ್ಟ ಮೇಲಧಿಕಾರಿಗಳ ಪೂರ್ವಾನುಮತಿಯನ್ನು ಪಡೆದು ಕಚೇರಿಯಿಂದ ಹೊರಗೆ ತೆರಳಬೇಕು ಎಂದಿದ್ದಾರೆ.
ಗ್ರಾಪಂ ಚಲನ-ವಲನ ವಹಿಯನ್ನು ಪ್ರತಿ ತಿಂಗಳು ತಾಪಂ ಇಒ, ತಾಪಂನಲ್ಲಿ ನಿರ್ವಹಣೆ ಮಾಡಿದ ಚಲನ-ವಲನವನ್ನು ಜಿಲ್ಲಾಮಟ್ಟದ ತಾಲೂಕು ನೋಡಲ್ ಅಧಿಕಾರಿ ಪರಿಶೀಲಿಸಬೇಕು. ಇನ್ನು ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಬಯೋಮೆಟ್ರಿಕ್ ಹಾಜರಾತಿಯ(ಆನ್‌ಲೈನ್) ಮಾಹಿತಿಯನ್ನು ಕಡ್ಡಾಯವಾಗಿ ಪಡೆದು ಪರಿಶೀಲಿಸಿ ತದನಂತರ ವೇತನವನ್ನು ಪಾವತಿಸಲು ಸಂಬಂಧಪಟ್ಟ ತಾಪಂ ಇಒ ಕ್ರಮ ವಹಿಸಬೇಕು. ತಾಪಂ, ಗ್ರಾಪಂ ವಾಹನ ಚಾಲಕರು, ಪುರುಷ ಗ್ರೂಪ್-ಡಿ ನೌಕರರು ಬಿಳಿಬಣ್ಣದ ಸಮವಸ್ತ್ರ ಮತ್ತು ಮಹಿಳಾ ಗ್ರೂಪ್-ಡಿ ನೌಕರರು ಸರ್ಕಾರ ನಿಗದಿಪಡಿಸಿರುವ ಆಕಾಶ ನೀಲಿ ಬಣ್ಣದ ಸೀರೆ ಧರಿಸಬೇಕು. ಕಚೇರಿ ಅವಧಿಯಲ್ಲಿ ಮಧ್ಯಾಹ್ನದ ಊಟದ ಸಮಯ 1.30 ರಿಂದ 2.30 ಇದೆ. ಈ ಸಮಯವನ್ನು ಸರಿಯಾಗಿ ಪಾಲನೆ ಮಾಡಬೇಕು. ಸರ್ಕಾರ, ಜಿಪಂ ಕಚೇರಿಯಿಂದ ಇ-ಮೇಲ್ ಮಾಡಲಾಗುವ ಪತ್ರ/ಸುತ್ತೋಲೆ/ಆದೇಶಗಳನ್ನು ಕಡ್ಡಾಯವಾಗಿ ಪ್ರತಿದಿನ ಪರಿಶೀಲಿಸಿ ಕ್ರಮವಹಿಸಿದ ನಂತರ ಪೂರಕ ದಾಖಲಾತಿಗಳೊಂದಿಗೆ ವರದಿಯನ್ನು ಜಿಪಂ ಕಚೇರಿಗೆ ನಿಗದಿತ ಅವಧಿಯಲ್ಲಿ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಸ್ಥಾನದಲ್ಲಿಯೇ ವಾಸ: ಪಿಡಿಒಗಳು ಸರ್ಕಾರದಿಂದ ನೀಡಿರುವ ಬಿಎಸ್‌ಎನ್‌ಎಲ್ ಸಿಯುಜಿ ಮೊಬೈಲ್ ಸಿಮ್‌ಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಮೊಬೈಲ್ ಸ್ವಿಚ್ ಆಫ್ ಮಾಡದೆ ಸದಾಕಾಲ ಚಾಲನೆಯಲ್ಲಿಟ್ಟಿರಬೇಕು. ಪಂಚತಂತ್ರ ತಂತ್ರಾಂಶದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಿಯುಜಿ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಅಂತೆಯೇ ತಾಪಂ, ಗ್ರಾಪಂ ಅಧಿಕಾರಿ, ಸಿಬ್ಬಂದಿ ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿರಬೇಕು. ಕಾರ್ಯಾಲಯಗಳ ಕೊಠಡಿಯಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿ, ಸದಾಕಾಲ ಚಾಲನೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿನ ಕಾರ್ಯವಿಧಾನ ಕೈಪಿಡಿ ನಿಯಮಗಳಲ್ಲಿ ತಿಳಿಸಿರುವಂತೆ ದಿನಚರಿ ಮತ್ತು ವಿಷಯ ವಹಿ ನಿರ್ವಹಣೆ ಮಾಡಿ ನಿಗದಿತ ನಮೂನೆಯಲ್ಲಿ ಪ್ರತಿ ಮಾಹೆ ಘೋಷ್ವಾರೆ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಹಿ ಪಡೆದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ನಿಗದಿಯಾಗಿರುವ ಗುರಿಗೆ ಅನುಗುಣವಾಗಿ ಅನುದಾನವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999, 2000ರನ್ವಯ ನಿಯಮಾನುಸಾರ ವೆಚ್ಚ ಮಾಡಿ ಮೇಲಧಿಕಾರಿಗಳು ಕರೆಯುವ ಸಭೆಗೆ ಪೂರಕ ಮಾಹಿತಿಗಳೊಂದಿಗೆ ಹಾಜರಾಗಬೇಕು. ಒಂದು ವೇಳೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯವಿಧಾನಗಳನ್ನು ಮಾಡಲು ವಿಫಲರಾದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.